(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 27. ಮಂಗನ ಕಾಯಿಲೆ ಅಥವಾ ಕ್ಯಾಸನೂರು ಕಾಡಿನ ಕಾಯಿಲೆ ಲಸಿಕೆ 2026ಕ್ಕೆ ಲಭ್ಯವಾಗಲಿದೆ. ಲಸಿಕೆ ತಯಾರಿಕೆ ಪ್ರಗತಿಯಲ್ಲಿದ್ದು, ಈ ನಿಟ್ಟಿನಲ್ಲಿ ಐಸಿಎಂಆರ್ ಜೊತೆ ಕೂಡ ಚರ್ಚೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅಲ್ಲಿಯವರೆಗೂ ಮಂಗನ ಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಂಡು ಯಾವುದೇ ಸಾವುಗಳಾಗದಂತೆ ಎಚ್ಚರಿಕೆ ವಹಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಂಗಳವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಮುಂಜಾಗರೂಕತೆಯಾಗಿ ಮಂಗನ ಕಾಯಿಲೆ ಇರುವ ಪ್ರದೇಶಗಳಲ್ಲಿ ಯಾರಿಗೆ ಜ್ವರ ಬಂದರೂ ಕಡ್ಡಾಯವಾಗಿ ಟೆಸ್ಟಿಂಗ್ ಮಾಡಿ ಚಿಕಿತ್ಸೆ ಅರಂಭಿಸಬೇಕು. ಇದರಿಂದ ಆರಂಭದಲ್ಲಿಯೇ ಕೆಎಫ್.ಡಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದರು.