ಮಂಗಳೂರು: ಟ್ರಾಯ್ನಿಂದ ಕರೆ ಮಾಡಿರುವುದಾಗಿ ನಂಬಿಸಿ 1.71 ಕೋಟಿ ರೂ.ವಂಚನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.21. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಂದ ಕರೆ ಮಾಡಿರುವುದಾಗಿ ತಿಳಿಸಿ, ಮೊಬೈಲ್ ಸಿಮ್ ಖರೀದಿ ಮಾಡಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಆರೋಪಿಸಿ 1.71 ಕೋ.ರೂ. ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ. 11ರಂದು ದೂರುದಾರರಿಗೆ ಅಪರಿಚಿತ ವ್ಯಕ್ತಿಯೋರ್ವ ಟ್ರಾಯ್ ಪ್ರತಿನಿಧಿ ಎಂದು ಕರೆ ಮಾಡಿದ್ದು, ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದೆ. ಮುಂಬೈನ ಅಂಧೇರಿ (ಪೂ)ದಲ್ಲಿ ಅದರ ಮೂಲಕ ಹಲವು ಕಾನೂನು ಬಾಹಿರ ಚಟುವಟಿಕೆ ನಡೆದಿವೆ. ಮಾರ್ಕೆಟಿಂಗ್ ನೆಪದಲ್ಲಿ ಆ ಮೊಬೈಲ್ ನಂಬರ್‌ನಿಂದ ಕರೆ ಮಾಡಿ ಕಿರುಕುಳ ನೀಡುತ್ತಿರುವ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಕೂಡಲೇ ಅಂಧೇರಿ ಪೂರ್ವ ಠಾಣೆಯನ್ನು ಸಂಪರ್ಕಿಸಬೇಕು. ಇಲ್ಲವಾದಲ್ಲಿ ನಿಮ್ಮ ಮೊಬೈಲ್ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುವುದು ಎಂದು ಎಚ್ಚರಿಸಿದ್ದ.

Also Read  ಕಲ್ಲುಗುಡ್ಡೆ: ಊಟ, ತಿಂಡಿ ಬಿಟ್ಟು ಮುಂದುವರಿದ ಮದ್ಯದಂಗಡಿ ವಿರೋಧಿ ಹೋರಾಟ ► ಕಡಬ ತಹಶಿಲ್ದಾರ್ ಗೆ ದಿಗ್ಬಂಧನ ವಿಧಿಸಿದ ಪ್ರತಿಭಟನಾಕಾರರು

ಬಳಿಕ ದೂರುದಾರರು ಅಪರಿಚತ ವ್ಯಕ್ತಿ ಪ್ರದೀಪ್ ಸಾವಂತ್ ಎಂಬಾತನಲ್ಲಿ ಮಾತನಾಡಿದ್ದು, ನರೇಶ್ ಗೋಯೆಲ್ ವಂಚನೆ ಪ್ರಕರಣವನ್ನು ಒಳಗೊಂಡಿರುವ ಮನಿ ಲ್ಯಾಂಡರಿಂಗ್ ಯೋಜನೆಯಲ್ಲಿ ಭಾಗಿಯಾಗಿರುವುದರಿಂದ ಇನ್ನೊಂದು ಎಫ್‌ಐಆರ್ ದಾಖಲಾಗಿದೆ. ಅಂಧೇರಿಯ ಬ್ಯಾಂಕ್‌ನ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದ್ದು, ಅದಕ್ಕೆ ಐಡೆಂಟಿಟಿ ಬಳಸಿ ಸಿಮ್ ಖರೀದಿಸಲಾಗಿದೆ. ಹೀಗಾಗಿ ನಿಮ್ಮನ್ನು ಬಂಧಿಸಲಾಗುತ್ತದೆ ಎಂದು ಹೇಳಿದ್ದ.ಬಳಿಕ ರಾಹುಲ್ ಕುಮಾರ್ ಎಂಬಾತ ಪೊಲೀಸ್ ಅಧಿಕಾರಿ ಮತ್ತು ಆಕಾಂಕ್ಷ ಎಂಬ ಮಹಿಳೆ ಸಿಬಿಐ ಅಧಿಕಾರಿಯೆಂದು ಹೇಳಿಕೊಂಡು ವಾಟ್ಸಾಪ್ ನಲ್ಲಿ ವೀಡಿಯೋ ಕರೆ ಮಾಡಿದ್ದಾರೆ. ಆಕಾಂಕ್ಷ ಎಂಬಾಕೆ ಸಿಬಿಐ ಕಚೇರಿಯ ನಕಲಿ ದಾಖಲೆ ಸೃಷ್ಟಿಸಿ ದೂರುದಾರರ ವಾಟ್ಸಾಪ್ ನಂಬರ್‌ಗೆ ಕಳುಹಿಸಿದ್ದಳು. ಈ ಪ್ರಕರಣದಿಂದ ಹೊರಬರಬೇಕಾದರೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಳು. ಅದರಂತೆ ದೂರುದಾರರು ನ. 13ರಿಂದ 19ರ ನಡುವೆ 53 ಲಕ್ಷ ರೂ., 74 ಲಕ್ಷ ರೂ., 44 ಲಕ್ಷ ರೂ. ಹೀಗೆ ಒಟ್ಟು 1.71 ಕೋ.ರೂ. ವರ್ಗಾಯಿಸಿದ್ದರು. ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top