(ನ್ಯೂಸ್ ಕಡಬ) newskadaba.com ಕಡಬ, ಜು.02. ಕಡಬ ಪಂಜ ರಸ್ತೆಯಲ್ಲಿನ ಸರಕಾರಿ ಸ್ವಾಮ್ಯದ ಮದ್ಯದಂಗಡಿಯಲ್ಲಿ ಪಾನಪ್ರಿಯರು ಮದ್ಯ ಖರೀದಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಭಾನುವಾರವೂ ಕಂಡುಬಂದಿದೆ. ಹೆದ್ದಾರಿ ಬದಿಗಳಲ್ಲಿನ ಮದ್ಯದಂಗಡಿಗಳನ್ನು ಮುಚ್ಚಬೇಕೆಂಬ ಸುಪ್ರಿಂಕೋರ್ಟ್ ಅದೇಶದಂತೆ ಕಡಬ ಪೇಟೆಯಲ್ಲಿನ ಎರಡು ಮದ್ಯದಂಗಡಿ ಹಾಗೂ ಕಡಬಕ್ಕೆ ಸಮೀಪದಲ್ಲಿರುವ ಆಲಂಕಾರು ಮತ್ತು ನೆಟ್ಟಣ ಪೇಟೆಯಲ್ಲಿನ ಮದ್ಯದಂಗಡಿ ಬಂದ್ ಮಾಡಲಾಗಿತ್ತು. ಆದರೆ ಕಡಬದಲ್ಲಿನ ಸರಕಾರಿ ಮದ್ಯದಂಗಡಿ ಹೆದ್ದಾರಿಯಿಂದ 200 ಮೀಟರ್ ಗಿಂತಲೂ ದೂರ ಇದೆ. ಹೀಗಾಗಿ ಈ ವೈನ್ ಶಾಪ್ನಲ್ಲಿ ಭಾರಿ ವ್ಯಾಪಾರ ನಡೆಯುತ್ತಿದೆ.
ಶನಿವಾರ ಮಧ್ಯಾಹ್ನ ಏರು ಹೊತ್ತಿನಲ್ಲಿ ಜನ ಬರಲಾರಂಭಿಸಿ ಸಂಜೆಯಾಗುತ್ತಿದ್ದಂತೆ ಖರೀದಿ ಭರಾಟೆ ಹೆಚ್ಚಾಯಿತು. ಭಾನುವಾರ ರಜಾ ದಿವಸವಾದ್ದರಿಂದ ಮತ್ತು ಕಡಬದ ವಾರದ ಸಂತೆ ಇದ್ದುದರಿಂದ ಕಡಬದಲ್ಲಿ ವೈನ್ ಶಾಪ್ ತೆರೆದಿರುವ ಬಗ್ಗೆ ಮಾಹಿತಿ ಪಡೆದುಕೊಂಡು ದೂರದೂರಿನ ಪಾನಪ್ರಿಯರ ದಂಡು ಹರಿದು ಬಂತು. ಬೆಳಿಗ್ಗೆ ಕೊಂಚ ಕಡಿಮೆಯಾಗಿದ್ದ ವ್ಯಾಪಾರ ಇಳಿಹೊತ್ತಿನಲ್ಲಿ ಜಾಸ್ತಿಯಾಗಿತ್ತು. ಈ ಹಿಂದೆ ಆಧಾರ್ ಕಾರ್ಡ್ ಮಾಡಿಸುವಲ್ಲಿ ತುರಾತುರಿಯಿಂದ ವರ್ತಿಸುತ್ತಿದ್ದ ಕೆಲವು ಜನ ಮದ್ಯದಂಗಡಿಯಲ್ಲಿ ಮದ್ಯ ಖರೀದಿಗಾಗಿ ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದರು. ಕೆಲವು ಗ್ರಾಹಕರು ಮುಖ ಕಾಣದ ರೀತಿಯಲ್ಲಿ ಹೆಲ್ಮೆಟ್ ಹಾಕಿಯೂ ಆಗಮಿಸಿದ್ದರು. ಒಟ್ಟಿನಲ್ಲಿ ಮರೆಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದವರಿಗೆ ಸುಪ್ರೀಂ ಕೋರ್ಟಿನ ಈ ಆದೇಶದಿಂದಾಗಿ ಸಂಕಷ್ಟ ಎದುರಾಗಿದೆ.
ಇದರ ಮಧ್ಯೆ ಮದ್ಯದಂಗಡಿಯ ಮುಂಭಾಗದಲ್ಲಿ ಹಾದುಹೋಗಿರುವ ಕಡಬ-ಪಂಜ ರಸ್ತೆ ಬದಿಯಲ್ಲಿ ಮದ್ಯದಂಗಡಿಯ ಗ್ರಾಹಕರು ಎಲ್ಲೆಂದರಲ್ಲಿ ತಮ್ಮ ವಾಹನ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.