(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 20. ಕರ್ನಾಟಕದಲ್ಲಿ ಬೆಲೆ ಏರಿಕೆ ಸರಣಿ ಮುಂದುವರೆದಿದ್ದು, ಇದೀಗ ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳ ಹೊರರೋಗಿ ಮತ್ತು ಒಳರೋಗಿ ಸೇವೆಗಳ ಶುಲ್ಕವನ್ನು ಹೆಚ್ಚಿಸಲು ರಾಜ್ಯ ಆರೋಗ್ಯ ಇಲಾಖೆ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ ಆಸ್ಪತ್ರೆ, ಮಿಂಟೊ ಆಸ್ಪತ್ರೆ ಸೇರಿದಂತೆ ಪ್ರಮುಖ ಸರ್ಕಾರಿ ಆಸ್ಪತ್ರೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ರಾಜ್ಯ ಟ್ರಾಮಾ ಕೇರ್ ಕೇಂದ್ರಗಳಲ್ಲಿ ಹೊರರೋಗಿ ಮತ್ತು ಒಳರೋಗಿ ಸೇವೆಗಳ ಶುಲ್ಕವನ್ನು ರಾಜ್ಯ ಆರೋಗ್ಯ ಇಲಾಖೆ ತೀವ್ರವಾಗಿ ಹೆಚ್ಚಿಸಿದೆ.ಈ ಶುಲ್ಕಗಳಲ್ಲಿ ಹಲವು ಸೇವೆಗಳ ಶುಲ್ಕಗಳನ್ನು ದ್ವಿಗುಣಗೊಳಿಸಲಾಗಿದ್ದು, ವೈದ್ಯಕೀಯ ಸೇವಾ ಶುಲ್ಕದಲ್ಲಿ ಗಣನೀಯ ಪರಿಷ್ಕರಣೆ ಮಾಡಲಾಗಿದೆ ಮತ್ತು ಇಲಾಖೆಯ ನಿರ್ದೇಶನದಂತೆ ತಕ್ಷಣವೇ ಜಾರಿಗೊಳಿಸಲಾಗುವುದು. ಹೊರರೋಗಿ ನೋಂದಣಿ ಶುಲ್ಕ 10 ರೂ.ನಿಂದ 20 ರೂ.ಗೆ ಏರಿಕೆಯಾಗಿದ್ದು, ಅದೇ ರೀತಿ ಒಳರೋಗಿಗಳ ಸೇವೆಯಲ್ಲಿ ಗಣನೀಯ ಏರಿಕೆ ಕಾಣಲಿದ್ದು, ಪ್ರವೇಶ ಶುಲ್ಕ 25 ರಿಂದ 50 ರೂ.ಗೆ ಏರಿಕೆಯಾಗಿದೆ. ಈ ಹಿಂದೆ 25 ರೂ.ಗಳಿದ್ದ ವಾರ್ಡ್ ಶುಲ್ಕವನ್ನು 50 ರೂ.ಗೆ ದ್ವಿಗುಣಗೊಳಿಸಲಾಗಿದೆ.