(ನ್ಯೂಸ್ ಕಡಬ) newskadaba.com ಸುಳ್ಯ, ನ. 20. ಸುಳ್ಯ- ಸುಬ್ರಹ್ಮಣ್ಯದ ಕಾಡಂಚಿನ ಪ್ರದೇಶಗಳಲ್ಲಿ ರಾತ್ರಿ ಸಾಮಾನ್ಯವಾಗಿ ಕಾಡಾನೆಗಳು ಓಡಾಟ ಮಾಡುವುದು ಸಾಮಾನ್ಯವಾಗಿದೆ. ಇದೀಗ ಸುಳ್ಯದ ಮರ್ಕಂಜದಲ್ಲಿ ತಡ ರಾತ್ರಿ ಮುಖ್ಯ ರಸ್ತೆಯಲ್ಲಿಯೇ ಕಾಡಾನೆ ಸಂಚರಿಸಿದೆ.
ಮೈಸೂರಿನಂತ ಬಾಡಿಗೆಗೆ ತೆರಳಿ ವಾಪಾಸು ಬರುತ್ತಿದ್ದ ವಾಹನವೊಂದಕ್ಕೆ ಹೈದಂಗೂರು ರಸ್ತೆಯ ಮಧ್ಯೆ 2 ಕಾಡಾನೆಗಳು ಎದುರಾದ ಘಟನೆ ನ. 17ರಂದು ನಡೆದಿದ್ದು ಚಾಲಕ ಜಾಣತನದಿಂದ ಆನೆಗಳು ಹೋದ ಬಳಿಕ ವಾಹನವನ್ನು ಚಲಾಯಿಸಿಕೊಂಡು ಮುಂದೆ ಸಾಗಿದ್ದಾರೆ. ಯಶಸ್ವಿ ಹೆಸರಿನ ವ್ಯಾನ್ ಪ್ರಯಾಣಿಕರನ್ನು ಬಿಟ್ಟು ರಾತ್ರಿ 3 ಗಂಟೆಗೆ ಮರಳಿ ಮರ್ಕಂಜ ಬಳಿಯ ಮಿತ್ತಡ್ಕದ ತನ್ನ ಮನೆಗೆ ಬರುತ್ತಿದ್ದಾಗ ಆನೆಗಳು ಎದುರಾಗಿದೆ. ಚಾಲಕ ನಾಗರಾಜ ರವರು ವ್ಯಾನನ್ನು ಸ್ವಲ್ಪ ಹೊತ್ತು ನಿಲ್ಲಿಸಿ ಬಳಿಕ ಕಾಡಾನೆಗಳು ರಸ್ತೆಯಿಂದ ಕಾಡೊಳಗೆ ಇಳಿದು ಹೋದ ನಂತರ ನಾಗರಾಜರು ತಮ್ಮ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಉಬರಡ್ಕ ಭಾಗದಲ್ಲಿದ್ದ ಕಾಡಾನೆಗಳು ಹೈದಂಗೂರು- ಕೊರತ್ತೋಡಿ ಭಾಗದಲ್ಲಿ ಬೀಡು ಬಿಟ್ಟಿದ್ದು, ನ.17ರ ಸಂಜೆ ರಸ್ತೆ ಬದಿಗೆ ಬಂದು, ಹೈದಂಗೂರು ಕಾಡಿನತ್ತ ಹೆಜ್ಜೆ ಹಾಕಿದ್ದವು.