(ನ್ಯೂಸ್ ಕಡಬ) newskadaba.com ನ. 16. ಉತ್ತರ ಪ್ರದೇಶ: ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 10 ನವಜಾತ ಶಿಶುಗಳು ಸಜೀವ ದಹನವಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿಯು ಶಿಶು ತೀವ್ರ ನಿಗಾ ಘಟಕದ ಸುತ್ತಲೂ ಆವರಿಸಿದೆ. ಬೆಂಕಿ ಹೊತ್ತಿಕೊಂಡಂತೆಯೇ ಕಂಗೆಟ್ಟ ಮಕ್ಕಳ ಪೋಷಕರು ಜೋರಾಗಿ ಕಿರುಚಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಆಘಾತಗೊಂಡಿದ್ದು, ವೈದ್ಯರು ಮತ್ತು ಇತರೆ ಸಿಬ್ಬಂದಿ ವಾರ್ಡ್‌ನ ಕಿಟಕಿ ಗಾಜುಗಳನ್ನು ಒಡೆದು ಅವುಗಳ ಮೂಲಕ ರೋಗಿಗಳನ್ನು ಹೊರಕ್ಕೆ ಕಳುಹಿಸಿದ್ದಾರೆ. ಘಟನೆಯಲ್ಲಿ ಹಲವು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ವಾರ್ಡ್ ನಲ್ಲಿ 54 ಮಕ್ಕಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದವು ಎಂದು ವರದಿಗಳಿಂದ ತಿಳಿದುಬಂದಿದೆ.