(ನ್ಯೂಸ್ ಕಡಬ) newskadaba.com ನ. 14. ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನ.15(ಶುಕ್ರವಾರ) ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆಯಲ್ಲಿ ಬಾಧಿತ ಗ್ರಾಮಗಳಿಂದ ಸಾವಿರಾರು ಜನರು ಭಾಗವಹಿಸಿಲಿದ್ದಾರೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.
ಈ ಕುರಿತು ಬುಧವಾರದಂದು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಧಿತ ಗ್ರಾಮಗಳ ವ್ಯಾಪ್ತಿಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಗುಂಡ್ಯದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಜನರಿಗೆ ತಿಳಿಸಲಾಗಿದೆ. ಪಶ್ಚಿಮ ಘಟ್ಟ ಸಂರಕ್ಷಣೆಯ ನೆಪದಲ್ಲಿ ಪಶ್ಚಿಮ ಘಟ್ಟದ ತಪ್ಪಲು ಮತ್ತು ಅರಣ್ಯದಂಚಿನಲ್ಲಿ ವಾಸಿಸುವ ಜನರನ್ನು ಆತಂಕದ ಸ್ಥಿತಿಯಲ್ಲಿ ಬದುಕುವಂತೆ ಮಾಡುತ್ತಿರುವ ಕಾನೂನುಗಳ ಜಾರಿಯನ್ನು ತಡೆಯಲು ಎಲ್ಲರೂ ಹೋರಾಡಬೇಕಿದೆ. ಭೂಮಿ ಕಳೆದುಕೊಳ್ಳುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯ ಬಗ್ಗೆ ಮಾಹಿತಿ ನೀಡದೇ ಜನರನ್ನು ಭಯಭೀತರನ್ನಾಗಿಸಿರುವ ಈ ವರದಿಯ ಬಗ್ಗೆ ಸರಕಾರವೂ ಅಗತ್ಯ ಪ್ರತಿರೋಧ ತೋರಿಸದೆ ಜನರನ್ನು ವಂಚಿಸುತ್ತಿದೆ. ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣವಾಗಿ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯ ಭೀತಿಯಲ್ಲಿರುವ ಎಲ್ಲ ಗ್ರಾಮಗಳ ಜನರು ಭಾಗವಹಿಸಿ ಸರಕಾರಕ್ಕೆ ಮತ್ತು ಸಂಬಂಧಪಟ್ಟವರಿಗೆ ಸೂಕ್ತ ಸಂದೇಶವನ್ನು ರವಾನಿಸುವ ಅಗತ್ಯವಿದೆ. ಇದು ರೈತ ಜನರ ಅಳಿವು ಉಳಿವಿನ ಪ್ರಶ್ನೆಯಾಗಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು. ಈ ಸಂದರ್ಭ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಪ್ರಮುಖರು ಉಪಸ್ಥಿತರಿದ್ದರು.