ಕಡಬ: ವೃದ್ದ ದಂಪತಿ ವಾಸವಿದ್ದ ಮನೆಯನ್ನು ಕೆಡವಿದ ಅಧಿಕಾರಿಗಳು..!

(ನ್ಯೂಸ್ ಕಡಬ) newskadaba.com ಕಡಬ, ನ. 13. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಆರು ವರ್ಷಗಳಿಂದ ವಾಸವಿದ್ದ ವೃದ್ದ ದಂಪತಿಗಳ ಮನೆಯೊಂದನ್ನು ಪೊಲೀಸ್ ನೇತೃತ್ವದಲ್ಲಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ನೆಲಸಮ ಮಾಡಿದ ಅಮಾನವೀಯ ಘಟನೆ ತಾಲೂಕಿನ ಕೌಕ್ರಾಡಿ ಎಂಬಲ್ಲಿ ನಡೆದಿದೆ.

ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿ ಮನೆಯನ್ನು ಬುಧವಾರ ಏಕಾಏಕಿ ಧ್ವಂಸಗೊಳಿಸಲಾಗಿದೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ಹಟ್ಟಿ ನಿವಾಸಿಗಳಾಗಿದ್ದ ದಂಪತಿ ಕೂಲಿ ಕೆಲಸಕ್ಕಾಗಿ ಕರಾವಳಿಗೆ ಆಗಮಿಸಿ ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದ ಸರ್ವೇ ನಂಬರ್ 123/1ರಲ್ಲಿ ಕಳೆದ 6 ವರ್ಷಗಳಿಂದ ವಾಸಿಸುತ್ತಿದ್ದರು. ದಂಪತಿಗೆ ಯಾವುದೇ ಪಿತ್ರಾರ್ಜಿತ ಆಸ್ತಿ ಇರಲಿಲ್ಲ. ಹೀಗಾಗಿ ಸರ್ಕಾರಿ ಜಾಗ 123/1ರಲ್ಲಿ ಕಾಪಿನಬಾಗಿಲು ಎಂಬಲ್ಲಿ ಸಣ್ಣ ಮನೆಕಟ್ಟಿಕೊಂಡಿದ್ದರು. ದಂಪತಿ ನಿತ್ಯ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.

Also Read  ಕಡಬ: ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ► ತಾಲೂಕು ತಹಶೀಲ್ದಾರರಿಗೆ ಮನವಿ

ವೃದ್ಧ ದಂಪತಿ ಸರ್ಕಾರಿ ಜಾಗದಲ್ಲಿ ಇದ್ದಾರೆ ಎಂಬ ಕಾರಣಕ್ಕಾಗಿ ಬೆಳ್ತಂಗಡಿ ತಾಲೂಕಿನ ಅಶೋಕ್‌ ಆಚಾರ್ಯ ಎಂಬವರು ಇವರನ್ನು ಒಕ್ಕಲೆಬ್ಬಿಸುವ ಸಲುವಾಗಿ ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಸರ್ಕಾರಿ ಜಾಗ ಖಾಲಿ ಮಾಡಲು ಹೈಕೋರ್ಟ್‌ ಸೂಚನೆ ನೀಡಿದ ಕಾರಣ ಕಳೆದ ಫೆಬ್ರವರಿಯಲ್ಲಿ ಮನೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆ ಕೆಡವದೆ ಪ್ರಕರಣ ತಣ್ಣಗಾಗಿತ್ತು. ಇಂದು ದಿಢೀರ್‌ ಆಗಮಿಸಿದ ಅಧಿಕಾರಿಗಳು ಮನೆಯ ವಸ್ತುಗಳನ್ನು ಹೊರಗೆ ಎಸೆದು ಮನೆಯನ್ನು ಕೆಡವಿ ಹಾಕಿದ್ದಾರೆ. ವೃದ್ಧ ದಂಪತಿ ಕಣ್ಣೀರು ಹಾಕಿದರೂ ಕರಗದ ಅಧಿಕಾರಿಗಳು ಮನೆ ತೆರವುಗೊಳಿಸಿದ್ದಾರೆ. ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಆರ್‌ಐ ಪೃಥ್ವಿರಾಜ್, ಉಪ್ಪಿನಂಗಡಿ ಪೊಲೀಸರ ನೇತೃತ್ವದಲ್ಲಿ ಮನೆ ತೆರವು ಮಾಡಲಾಗಿದೆ.

ಈ ಸರ್ಕಾರಿ ಜಾಗದಲ್ಲಿ ನಾವು ನಿರ್ಮಿಸಿರುವ ಸಣ್ಣ ಮನೆಯಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಅಥವಾ ದಯಮಾಡಿ ವೃದ್ಧರಾದ ನಮಗೆ ದಯಾಮರಣ ಅಥವಾ ಇನ್ನಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶವನ್ನು ನೀಡಿ ಎಂದು ದಂಪತಿ ಈ ಹಿಂದೆ ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದರು.

error: Content is protected !!
Scroll to Top