ಒನಕೆ ಓಬವ್ವರ ಸಾಹಸ ಮತ್ತು ಧೈರ್ಯ ಮಾದರಿ ಮಮತಾ ಗಟ್ಟಿ

(ನ್ಯೂಸ್ ಕಡಬ) newskadaba.com ನ. 12. ವೀರ ವನಿತೆ ಒನಕೆ ಓಬವ್ವಳು ಸಾಮಾನ್ಯ ಮಹಿಳೆಯಾಗಿದ್ದರೂ, ಅವಳ ನಾಡ ಪ್ರೇಮದಿಂದ, ಧೈರ್ಯ, ಸಾಹಸ ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದು, ಅವರ ಸಾಧನೆಯನ್ನು ನಾವೆಲ್ಲರೂ ತಿಳಿದುಕೊಂಡಿರಬೇಕು ಎಂದು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು. ಅವರು ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕುದ್ರೋಳಿ ನಾರಾಯಣಗುರು ಪಿಯು ಕಾಲೇಜಿನಲ್ಲಿ ನಡೆದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಒನಕೆ ಓಬವ್ವರಂತ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮುಖ್ಯ ಉದ್ದೇಶವೇ ಅವರ ವ್ಯಕ್ತಿತ್ವ, ಅವರ ಸಾಧನೆಗಗಳು ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕು, ಸ್ಫೂರ್ತಿಯಾಗಬೇಕು ಎಂಬ ಉದ್ದೇಶದಿಂದ ಜಯಂತಿಗಳನ್ನು ಆಚರಿಸುವಂತೆ ತಿಳಿಸಿದೆ ಎಂದರು. ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ವೀರ ವನಿತೆ ಒನಕೆ ಓಬವ್ವಳ ಬಗ್ಗೆ ಉಪನ್ಯಾಸ ನೀಡಿ, ಒನಕೆ ಓಬವ್ವಳ ಚರಿತ್ರೆಯು ಸಾವಿರಾರು ಪುಟಗಳನ್ನು ಹೊಂದಿಲ್ಲ. ಆದರೆ ಅವಳ ಸಾಧನೆ ಧೈರ್ಯ, ಪರಾಕ್ರಮಗಳು ಇಂದಿಗೂ ಚರಿತ್ರೆಯಾಗಿ ಉಳಿದಿದೆ ಎಂದರು.

Also Read  ಕೋಸ್ಟಲ್‌ವುಡ್‌‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ "ಇಂಗ್ಲೀಷ್" ತುಳು ಸಿನಿಮಾ ಎಪ್ರಿಲ್ 3ರಂದು ದೇಶ-ವಿದೇಶಗಳಲ್ಲಿ ಬಿಡುಗಡೆ

ಜಗತ್ತಿನಲ್ಲಿ ನಾರಿ ಶಕ್ತಿ ಇಲ್ಲದೇ ಯಾವ ಚರಿತ್ರೆಯೂ ಅಂತ್ಯಗೊಂಡಿಲ್ಲ, ಮಹಿಳೆಯು ಕೇವಲ ಕುಟುಂಬದ ಜವಾಬ್ದಾರಿಯನ್ನು ಮಾತ್ರವಲ್ಲದೇ ಸಮಯ ಸಂದರ್ಭ ಒದಗಿ ಬಂದಾಗ ದಿಟ್ಟತನದಿಂದ ತನ್ನ ಸಮಾಜವನ್ನು, ತನ್ನ ನಾಡನ್ನು ಕಾಪಾಡಿಕೊಳ್ಳಲು ಓಬವ್ವರಂತೆ ಹೋರಾಡಿದ ಅನೇಕ ಇತಿಹಾಸವಿದೆ. ಚರಿತ್ರೆಗಳನ್ನು ನಾವು ಕೇಳುವುದು ಮಾತ್ರವಲ್ಲ ಹೊಸ ಚರಿತ್ರೆಯ ನಿರ್ಮಾಣಕ್ಕೆ ಕಾರಣವಾಗಬೇಕು.

ವಿದ್ಯಾರ್ಥಿ ಜೀವನದ ನಂತರದ ಬದುಕು ಸವಾಲಿನದ್ದಾಗಿದೆ, ಸಣ್ಣಪುಟ್ಟ ವಿಷಯಗಳಿಗೆ ಆತ್ಮಹತ್ಯೆ ಪರಿಹಾರವಲ್ಲ, ಓಬವ್ವರಂತ ಮಹಾನ್ ವ್ಯಕ್ತಿಗಳು ಎದುರಿಸಿದಂತಹ ಕಷ್ಟಗಳು, ಸವಾಲುಗಳನ್ನು ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳನ್ನು ನಾವು ಅರಿತುಕೊಂಡಾಗ ಭವಿಷ್ಯದಲ್ಲಿ ಸಮಸ್ಯೆಗಳಿಂದ ಹೊರಬರಲು ಧೈರ್ಯ, ಆತ್ಮವಿಶ್ವಾಸ ಮೂಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಮಾತನಾಡಿ, ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು, ತಂದೆ ತಾಯಿ, ಗುರುಗಳು ಹೇಳಿದ ವೇದ ವಾಕ್ಯವನ್ನು ಮನದಲ್ಲಿಟ್ಟು ಜೀವನವನ್ನು ಮುನ್ನಡೆಸಿದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ನಾರಾಯಣಗುರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರೇಣುಕಾ ಅರುಣ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ಉಪನ್ಯಾಸಕ ಕೇಶವ ಬಂಗೇರ ನಿರೂಪಿಸಿದರು.

error: Content is protected !!
Scroll to Top