(ನ್ಯೂಸ್ ಕಡಬ) newskadaba.com ನ. 09. ಪ್ರವಾಸಿಗರ ಆಕರ್ಷಣೆಯಲ್ಲೊಂದಾದ ಮಲ್ಪೆಯ ಫ್ಲೋಟಿಂಗ್ ಬ್ರಿಡ್ಜ್ ನವೆಂಬರ್ 6ರಿಂದ ಪ್ರವಾಸಿಗರಿಗೆ ತೆರೆಯಲಾಗಿದ್ದು, ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆತಿದೆ. ಪ್ರತಿದಿನ 4ರಿಂದ 5 ಸಾವಿರ ಪ್ರವಾಸಿಗರು ಬೀಚ್‌ಗೆ ಬರುತ್ತಿದ್ದು, ವಾರಾಂತ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಸಂಜೆ ಹೊತ್ತಿಗೆ ಮಲ್ಪೆ ಬೀಚ್ ಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಸುಮಾರು 130 ಮೀ. ಉದ್ದ, 3 ಮೀ. ಅಗಲವಿರುವ ಈ ಬ್ರಿಡ್ಜ್ ನಲ್ಲಿ ಏಕಕಾಲಕ್ಕೆ 200ಕ್ಕೂ ಮಿಕ್ಕ ಪ್ರವಾಸಿಗರು ತುದಿಯಲ್ಲಿ ನಿಂತು ಸೂರ್ಯಾಸ್ತವನ್ನು ನೋಡಬಹುದು. ಸೇತುವೆಯ ಎರಡೂ ಬದಿಯಲ್ಲಿ ಪ್ರವಾಸಿಗರ ರಕ್ಷಣೆಗೆ ರೈಲಿಂಗ್ಸ್ ಅಳವಡಿಸಲಾಗಿದೆ. ಸಮುದ್ರ ಭಾಗದಲ್ಲಿರುವ ತುದಿಯಲ್ಲಿ ಪ್ಲಾಟ್‌ಫಾರ್ಮ್ 15 ಅಡಿ ಉದ್ದ, 8 ಅಡಿ ಅಗಲವಿದೆ. ಸಮುದ್ರಕ್ಕೆ ಬರುವ ಪ್ರವಾಸಿಗರ ರಕ್ಷಣೆಗಾಗಿ 13 ಮಂದಿ ಜೀವ ರಕ್ಷಕರು, ಲೈಪ್ ಜಾಕೆಟ್, ಲೈಫ್ ಬಾಯ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ 15 ನಿಮಿಷಗಳ ಅವಧಿಗೆ 150 ರೂ. ಶುಲ್ಕ ನಿಗದಿಪಡಿಸಲಾಗಿದೆ. ಜೊತೆಗೆ ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ ತೆರಳುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್ ಜಾಕೆಟ್ ತೊಡಬೇಕಾಗಿದೆ.