(ನ್ಯೂಸ್ ಕಡಬ) newskadaba.com , ಸಾಂಗ್ಲಿ, ನ. 09.: ಜಗತ್ತಿನ ಯಾವ ಶಕ್ತಿಯೂ ಸಹ ಜಮ್ಮು ಮತ್ತು ಕಾಶ್ಮೀರಕ್ಕೆ ಪುನಃ ಸಂವಿಧಾನದ 370ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇರಲಿ, ಅವರ ಮುಂದಿನ 4 ತಲೆಮಾರಿಗೂ 370ನೇ ವಿಧಿ ಮರು ಜಾರಿ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಅಬ್ಬರಿಸಿದ್ದಾರೆ.
ವಿಶೇಷ ಸ್ಥಾನಮಾನದ ಕುರಿತು ಅಧಿವೇಶನದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಇಬ್ಬರೂ ನಾಯಕರಿಂದ ಇಂಥ ಹೇಳಿಕೆಗಳು ಹೊರಬಿದ್ದಿದೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಮೋದಿ, ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಜಮ್ಮು-ಕಾಶ್ಮೀರದಿಂದ ಸಂವಿಧಾನವನ್ನು ಹೊರಗೆ ತರಲು ಯತ್ನಿಸುತ್ತಿದೆ. ಆದರೆ, ಜಗತ್ತಿನ ಯಾವುದೇ ಶಕ್ತಿಯು ಜಮ್ಮು- ಕಾಶ್ಮೀರಕ್ಕೆ ಮತ್ತೆ 370ನೇ ವಿಧಿಯನ್ನು ತರಲು ಸಾಧ್ಯವಿಲ್ಲ. ದೇಶ ಒಗ್ಗಟ್ಟಾಗಿದ್ದರೆ ಮಾತ್ರ ಸುರಕ್ಷಿತವಾಗಿರಬಹುದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು’ ಎಂದು ಪ್ರಧಾನಿ ಹೇಳಿದರು.