ಸರ್ಕಾರ ಯಾವುದೇ ಖಾಸಗಿ ಆಸ್ತಿ ವಶಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com . 06 : ಸರಕಾರವು ಯಾವುದೇ ಖಾಸಗಿ ಆಸ್ತಿಯನ್ನು ವಶಪಡಿಸಿಕೊಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ‘ಸಮುದಾಯದ ಒಳಿತಿನ ಹೆಸರಲ್ಲಿ, ಸರ್ಕಾರಗಳು ಯಾವುದೇ ಖಾಸಗಿ ಆಸ್ತಿಯನ್ನು ಸಂವಿಧಾನದ ನಿಯಮಗಳ ಹೆಸರಿನಲ್ಲಿ ಏಕಪಕ್ಷೀಯವಾಗಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಹೀಗೆ ವಶಪಡಿಸಿಕೊಳ್ಳಲು ಉದ್ದೇಶಿಸಿರುವ ಆಸ್ತಿಯು ಕೆಲವೊಂದು ಮಾನದಂಡಗಳನ್ನು ಪೂರೈಸಿದರಷ್ಟೇ ಅದು ಸಮುದಾಯದ ಭೌತಿಕ ಸಂಪನ್ಮೂಲ ಎಂದು ಪರಿಗಣಿಸಲ್ಪಡುತ್ತದೆ. ಅಂಥ ಸಂದರ್ಭದಲ್ಲಿ ಮಾತ್ರ ಸರ್ಕಾರಗಳು ಖಾಸಗಿ ಆಸ್ತಿ ವಶಪಡಿಸಿಕೊಳ್ಳಬಹುದು’ ಎಂದು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ 7:2 ಬಹುಮತದಿಂದ ಐತಿಹಾಸಿಕ ತೀರ್ಪು ನೀಡಿದೆ.

1977 ಮತ್ತು 1980ರಲ್ಲಿ ಸುಪ್ರೀಂಕೋರ್ಟ್‌ನ ಎರಡು ಪ್ರತ್ಯೇಕ ನ್ಯಾಯಪೀಠಗಳು ಈ ವಿಷಯದಲ್ಲಿ ನೀಡಿದ್ದ ತೀರ್ಪುಗಳು ವೈರುಧ್ಯ ಹೊಂದಿದ್ದ ಹಿನ್ನೆಲೆಯಲ್ಲಿ ಎದ್ದಿದ್ದ ಅನುಮಾನಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ 9 ನ್ಯಾಯಾಧೀಶರ ಸಾಂವಿಧಾನಿಕ ಪೀಠ ಸುದೀರ್ಘ ವಿಚಾರಣೆ ನಡೆಸಿ ಮಂಗಳವಾರ ಈ ತೀರ್ಪು ಪ್ರಕಟಿಸಿದೆ. ನ್ಯಾ.ಚಂದ್ರಚೂಡ್‌ ತಾವು ಮತ್ತು ಇತರೆ 6 ನ್ಯಾಯಾಧೀಶರ ಪರವಾಗಿ ಒಂದು ತೀರ್ಪು ಬರೆದರೆ, ತೀರ್ಪಿನ ಮೂಲ ಅಂಶಗಳನ್ನು ಭಾಗಶಃ ಬೆಂಬಲಿಸಿ ಹಾಗೂ ಕೆಲವು ಭಾಗಗಳಿಗೆ ಆಕ್ಷೇಪಿಸಿ ನ್ಯಾ. ಬಿ.ವಿ. ನಾಗರತ್ನ ಪ್ರತ್ಯೇಕ ತೀರ್ಪು ಬರೆದರು. ಇನ್ನು ನ್ಯಾ. ಸುಧಾಂಶು ಧುಲಿಯಾ, ಇತರೆ ಎಲ್ಲ ನ್ಯಾಯಾಧೀಶರ ತೀರ್ಪಿಗೆ ವಿರುದ್ಧವಾದ ಸಂಪೂರ್ಣ ಭಿನ್ನ ಅಭಿಪ್ರಾಯ ಹೊಂದಿರುವ ತೀರ್ಪು ಬರೆದರು.

Also Read  ಕೊಡಗು - ಕೇರಳ ಮಳೆಹಾನಿ ಸಂತ್ರಸ್ತರಿಗೆ ನೆರವು ► ಜೇಸಿಐ ಕಡಬ ಕದಂಬ ವತಿಯಿಂದ ಸಂಗ್ರಹಿಸಲಾದ ನಗದು, ವಸ್ತುಗಳ ಹಸ್ತಾಂತರ

error: Content is protected !!
Scroll to Top