ಕಾನೂನು ಸೌಲಭ್ಯಗಳ ಬಗ್ಗೆ ಜನಸಾಮಾನ್ಯರು ತಿಳಿದಿರಬೇಕು- ಸಿವಿಲ್ ನ್ಯಾಯಾಧೀಶೆ ಬಿ.ಜಿ.ಶೋಭಾ

(ನ್ಯೂಸ್ ಕಡಬ) newskadaba.com ನ. 05. ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ನೀಡಲಾಗುವ ಹಲವಾರು ಕಾನೂನು ಸೌಲಭ್ಯಗಳ ಬಗ್ಗೆ ಜನಸಾಮಾನ್ಯರಿಗೆ  ತಿಳಿದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ. ಜಿ. ಹೇಳಿದರು. ಅವರು ಸೋಮವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ, ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ  ಜಿಲ್ಲೆಯ ಉದ್ಯೋಗದಾತರಿಗೆ, ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡಿದರು.

ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಜನಸಾಮಾನ್ಯರಿಗೆ ಕೋರ್ಟ್‍ ನಲ್ಲಿ ವಕೀಲರನ್ನು ನೇಮಕ ಮಾಡಲು ಸಾಧ್ಯವಾಗದೇ ಇದ್ದಾಗ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕೆಲವೊಂದು ಅರ್ಹತೆಗಳಿಗನುಗುಣವಾಗಿ ಉಚಿತವಾಗಿ ವಕೀಲರನ್ನು ಒದಗಿಸಲಾಗುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ವಿವಿಧ ಸಮಿತಿಗಳಿದ್ದು, ಕೇವಲ ಕೋರ್ಟ್ ಕೇಸ್ ಮಾತ್ರವಲ್ಲದೇ ಕೆಲವೊಂದು ಕೌಟುಂಬಿಕ, ವೈಯಕ್ತಿಕ, ಸರಕಾರದಿಂದ ಸೌಲಭ್ಯಗಳು ಸರಿಯಾಗಿ ಸಿಗದೇ ಇದ್ದಾಗ, ಸರಕಾರಿ ಕಚೇರಿ ಕೆಲಸದಲ್ಲಿ ವಿಳಂಬ ಮುಂತಾದ ಸಮಸ್ಯೆಗಳಿಗೂ ಪರಿಹಾರವನ್ನು, ಸಲಹೆ ಸೂಚನೆಗಳನ್ನು ಪ್ರಾಧಿಕಾರದಿಂದ ನೀಡಲಾಗುತ್ತದೆ ಎಂದು ಹೇಳಿದರು.

Also Read  ಇಂದು ಏರಿಕೆ ಕಂಡ ಚಿನ್ನದ ದರ

ಕೆಲವೊಂದು ಕೇಸುಗಳಲ್ಲಿ ಸಂತ್ರಸ್ಥರಿಗೆ ಪರಿಹಾರವನ್ನು ಒದಗಿಸಿಕೊಡುವ ಕೆಲಸವನ್ನು ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತದೆ. ಇದಕ್ಕಾಗಿ ಸಂತ್ರಸ್ಥರು  ಪ್ರಾಧಿಕಾರಕ್ಕೆ ಅರ್ಜಿ ಕಳುಹಿಸಬೇಕು. ಸಮಿತಿಯು ಸಮಸ್ಯೆಗಳನ್ನು, ಹಾನಿಯನ್ನು ಗಮನಿಸಿ ಪರಿಹಾರವನ್ನು ನೀಡಬೇಕು/ಬೇಡವೋ ಎಂಬುದನ್ನು ನಿರ್ಧರಿಸುತ್ತದೆ.  ಕಾನೂನು ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ಪ್ರಾಧಿಕಾರದಲ್ಲಿ ಇರುವ ಫ್ರೆಂಡ್ ಆಫೀಸ್ ಮೂಲಕ ಮಾಹಿತಿಯನ್ನು ಪಡೆಯಬಹುದು ಅಥವಾ ಪ್ರಾಧಿಕಾರದ ಹೆಲ್ಪ್‍ ಲೈನ್ ಸಂಪರ್ಕಿಸಬಹುದು ಎಂದರು.

ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಳ್ಳಿಗಳನ್ನು ದತ್ತು ತೆಗೆದುಕೊಂಡು  ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿರುವ ಜನರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಹಾಗೂ  ಕಾನೂನು ವಿದ್ಯಾರ್ಥಿಗಳ ಜೊತೆಗೂಡಿ ಸರ್ವೆ ಕಾರ್ಯವನ್ನು ನಡೆಸಿ ಸರಕಾರಿ ಸೌಲಭ್ಯ ವಂಚಿತರಾದ ಅವರಿಗೆ ಸೌಲಭ್ಯವನ್ನು ನೀಡುವ ಕೆಲಸವನ್ನು ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತಿದೆ ಎಂದರು. ಪ್ರತಿಯೊಬ್ಬ ಜನಸಾಮಾನ್ಯರಿಗೂ ಕಾನೂನಿನ ಬಗ್ಗೆ ಅರಿವಿರಬೇಕು. ಯಾವುದೇ  ಸಮಸ್ಯೆಗಳು ಉಂಟಾದರೆ ಕಾನೂನಿನ ಮೂಲಕ  ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ಅರಿತಿರಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಮಾತನಾಡಿ,  ಕಾನೂನಿನ ಬಗ್ಗೆ ಕಾಯಿದೆಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು. ಯಾವುದೇ ಒಂದು ದಂಡ ವಿಧಿಸಿದಾಗ ಅದರ ಬಗ್ಗೆ ಮಾಹಿತಿ ಇರಬೇಕು ದಂಡ ವಿಧಿಸುವಾಗ ಯಾವುದೇ ತೊಂದರೆಗಳಾಗಬಾರದು . ಅದಕ್ಕಾಗಿ ಮೊದಲೇ ಅದರ ಬಗ್ಗೆ ತಿಳಿದುಕೊಂಡಿರಬೇಕು. ಕಾರ್ಮಿಕರಿಗೆ, ಡ್ರೈವರ್‍ಗಳಿಗೆ ಅವರ ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಇರಬೇಕು. ಮಾಲಿಕರಿಗೆ ಕಾಯ್ದೆಗಳ ಬಗ್ಗೆ ಅರಿವಿರಬೇಕು. ಕಾರ್ಮಿಕರ ಕಾಯಿದೆಗಳನ್ನು ಮಾಲೀಕನಾದವನು ತಿಳಿದುಕೊಳ್ಳದಿರುವುದು ಅಪರಾಧವಾಗಿದೆ ಎಂದರು.

Also Read  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ➤ ವಿಕಲಚೇತನರಿಂದ ಅರ್ಜಿ ಆಹ್ವಾನ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ ಮಾತನಾಡಿ, ಈ ಕಾರ್ಯಗಾರದ ಮುಖ್ಯ ಉದ್ದೇಶವೇ  ಕಾರ್ಮಿಕರಿಗೆ ಇಲಾಖೆಯಿಂದ ಹಾಗೂ ಕಾನೂನಿನ ಮೂಲಕ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸುವುದಾಗಿದೆ. ಯಾವುದೇ ಕ್ರಮ ಜರುಗಿಸುವ ಮೊದಲು  ಅದರ ಬಗ್ಗೆ ಮೊದಲೇ ಮಾಹಿತಿ ಇರಬೇಕು. ಕಾಯಿದೆಗಳನ್ನು ಅನುಷ್ಠಾನ ಮಾಡುವ ಬಗ್ಗೆ ಹಾಗೂ ಕಾರ್ಮಿಕರ ಮತ್ತು ಮಾಲೀಕರ ನಡುವೆ ಇರುವ ಸಮಸ್ಯೆಗಳು ಗೊಂದಲಗಳನ್ನು ನಿವಾರಿಸುವ ಉದ್ದೇಶದಿಂದ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ  ಎಂದರು.

ಈ ಸಂದರ್ಭದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಪ್ರಾದೇಶಿಕ ಆಯುಕ್ತ ಎ. ಪಿ. ಉನ್ನಿಕೃಷ್ಣನ್, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷಣೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಖಾನೆಗಳ ಉಪ ನಿರ್ದೇಶಕ ಎಂ. ಎಸ್. ಮಹಾದೇವ್, ಕಾರ್ಮಿಕರ ರಾಜ್ಯ ವಿಮಾ ಯೋಜನೆ ಮತ್ತು ವೈದ್ಯಕೀಯ ಸೇವೆ, ಉಪಕೇಂದ್ರೀಯ ಕಾರ್ಯಾಲಯ ಉಪನಿರ್ದೇಶಕ ಗುರುವಿಂದರ್ ಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪನಿರ್ದೇಶಕ ಎ. ಉಸ್ಮಾನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ಬಿ. ಎಸ್. ಹೇಮಲತಾ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಮನೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top