ಶಕ್ತಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ

(ನ್ಯೂಸ್ ಕಡಬ) newskadaba.com ನ. 01.  ಶಕ್ತಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಸ್ತಾರ ಚಾನಲ್ ನ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮಣೆ ಅವರು ರಾಷ್ಟ್ರಧ್ವಜ ಮತ್ತು ನಾಡಧ್ವಜವನ್ನು ಆರೋಹಣವನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ದೀಪವನ್ನು ಹಚ್ಚುವುದರಿಂದ ಕಣ್ಣಿಗೆ ಆನಂದವಾಗುತ್ತದೆ. ಬೆಳಕು ಸಿಗುತ್ತದೆ. ನಮ್ಮ ಮುಖದ ಮುಂದೆ ಇರುವ ಬೆಳಕಿನ ತೀವ್ರತೆ ಬೆಳಗುತ್ತಾ ಹೋಗಬೇಕು. ನಾವು ಬೆಳೆದ ಹಾಗೆ ನಮ್ಮ ಭವಿಷ್ಯವು ಬೆಳಗಬೇಕು. ಅದಕ್ಕಾಗಿ ನಾವು ಕೈಜೋಡಿಸಿ ಬೇಡಿಕೊಳ್ಳಬೇಕು. ಮಕ್ಕಳ ಜೀವನ ಬೆಳಗಬೇಕು ಎಂಬುದು ಶಿಕ್ಷಕರ ಹೆತ್ತವರ ಮತ್ತು ಎಲ್ಲರ ಗುರಿಯಾಗಿರುತ್ತದೆ. ಹಾಗೆ ಬೆಳಗಬೇಕಾದರೆ ಒಂದಷ್ಟು ಸಂಕಲ್ಪವನ್ನು ನಾವು ಮನಸ್ಸಿನಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಜಗತ್ತಿನಲ್ಲಿ ನಾನು ನನ್ನದು ಎಂಬುದನ್ನು ಬಿಟ್ಟು ಎಲ್ಲರೊಂದಿಗೂ ಹೊಂದಿಕೊAಡು ಜೀವನ ನಡೆಸುವ ಸಂಸ್ಕಾರವನ್ನು ನಾವು ಕಲಿಯಬೇಕು. ಮುಂದುವರಿದು ಎಲ್ಲಾ ಭಾಷಾ ವಿಜ್ಞಾನಿಗಳು ಹೇಳುವುದು ಎಲ್ಲಕ್ಕಿಂತಲೂ ಶ್ರೇಷ್ಟವಾದುದು ಮಾತೃ ಭಾಷೆ. ನಾವು ಮನೆಗಳಲ್ಲಿ ಆಡುವ ಎಲ್ಲಾ ಭಾಷೆಗಳು ಶ್ರೇಷ್ಟವು. ಕನ್ನಡ ನಮ್ಮ ತಾಯಿ. ಅದು ಮಾತೃ ಭಾಷೆ.  ಭಾರತದಲ್ಲಿರುವ ಭಾಷೆಗಳ ಪೈಕಿ ಕನ್ನಡ ಅತ್ಯಂತ ವೈಜ್ಞಾನಿಕವಾದ ಭಾಷೆ. ನಾವು ಎಲ್ಲಾ ಭಾಷೆಗಳನ್ನು ಗೌರವಿಸಬೇಕು. ಪರಭಾಷೆಗಳ ವ್ಯಾಮೋಹದಿಂದ ನಾವು ಇಂದು ಮಾತೃ ಭಾಷೆಯನ್ನು ಮರೆಯುತ್ತಿದ್ದೇವೆ. ಇಲ್ಲಿ ಯಾವ ಭಾಷೆಯು ಶ್ರೇಷ್ಟವಲ್ಲ ಯಾವ ಭಾಷೆಯೂ ಕನಿಷ್ಟವಲ್ಲ. ಭಾಷೆ ನಮ್ಮ ವ್ಯವಹಾರದ ಸಂಪರ್ಕವನ್ನು ಕಲ್ಪಿಸುವ ಸಾಧನ. ನಮಗೆ ಸಂಸ್ಕಾರ ಕೊಡುವಂತಹ ಸಾಧನ. ಹಾಗಾಗಿ ಎಲ್ಲಾ ಭಾಷೆಯನ್ನು ಕಲಿಯೋಣ. ಕನ್ನಡದ ಬಗ್ಗೆ ಕೀಳರಿಮೆಯನ್ನು ಹೊಂದದೆ, ಭಾಷೆಯನ್ನು ಹಗುರವಾಗಿ ನೋಡದೆ ಕನ್ನಡದೊಂದಿಗೆ ಕನಿಷ್ಟ ನಾಲ್ಕೈದು ಭಾಷೆಗಳನ್ನು ಕಲಿಯೋಣ ಎಂದು ರಾಜ್ಯೋತ್ಸವದ ಶುಭಾಶಯಗಳೊಂದಿಗೆ ಕಿವಿಮಾತನ್ನು ಹೇಳಿದರು. ಶಕ್ತಿವಿದ್ಯಾ ಸಂಸ್ಥೆಯ ಎರಡನೇ ತರಗತಿಯ ವಿದ್ಯಾರ್ಥಿ ಕಿಶನ್ ಭಟ್ ಕರ್ನಾಟಕದ ಎಲ್ಲ ಜಿಲ್ಲೆಗಳ ವಿಶೇಷತೆಗಳ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆಸಿ ನಾಯಕ್‌ರವರು ಕನ್ನಡ ರಾಜ್ಯೋತ್ಸವ ದಿನಾಚರಣೆಯ ಶುಭಾಶಯವನ್ನು ಎಲ್ಲರಿಗೂ ಕೋರಿದರು.

Also Read  ಬೆಳ್ತಂಗಡಿ: ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ ➤ ನಾಲ್ವರು ಮರಗಳ್ಳರ ಬಂಧನ

ಈ ಸಂದರ್ಭದಲ್ಲಿ ಸಿಬಿಎಸ್‌ಇ ಬೋರ್ಡ್ ನಡೆಸುವ ಅಂತಿಮ ಪರೀಕ್ಷೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಅಮೃತ ಭಟ್ ಇವರಿಗೆ ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಗಳಿಸಿರುವುದಕ್ಕಾಗಿ ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ಸಾಧಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಕನ್ನಡ ನಾಡು ನುಡಿ ಕುರಿತಾದ ಹಾಡು, ನಾಟಕ ಮತ್ತು ನೃತ್ಯವನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಧ್ಯಕ್ಷರಾದ ಡಾ.ಕೆ.ಸಿ.ನಾಯಕ್, ಪ್ರಧಾನ ಸಲಹೆಗಾರರಾದ ರಮೇಶ್, ಶಕ್ತಿ ವಸತಿ ಶಾಲಾ ಪ್ರಾಂಶುಪಾಲರಾದ ಬಬಿತಾ ಸೂರಜ್ ರವರು ಉಪಸ್ಥಿತರಿದ್ದರು. ಕುಮಾರಿ ಅರ್ಪಿತಾ ಕಾರ್ಯಕ್ರಮ ನಿರೂಪಿದರೆ, ಉಪನ್ಯಾಸಕಿ ಹಂಸಲೇಖರವರು ಸ್ವಾಗತಿಸಿದರು. ಕಾವ್ಯರವರು ಅತಿಥಿಗಳ ಪರಿಚಯ ವಾಚಿಸಿದರೆ, ಉಪನ್ಯಾಸಕರಾದ ಸುನಿಲ್‌ರವರು ವಂದಿಸಿದರು.

error: Content is protected !!
Scroll to Top