(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.21. ಹಿಂಸೆ ಮತ್ತು ಹಣ ಬಲದ ಮೂಲಕ ಬಿಜೆಪಿಯು ಅಧಿಕಾರವನ್ನು ಹಿಡಿಯುತ್ತಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಅವರು ಮಂಗಳವಾರದಂದು ಮಂಗಳೂರಿನ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆಸಿದ ಜನಾಶೀರ್ವಾದ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಬಿಜೆಪಿಯು ಹಣಕೊಟ್ಟು ನಾಯಕರನ್ನು ಖರೀದಿಸಿ ಮೇಘಾಲಯ, ಮಣಿಪುರ, ಗೋವಾಗಳಲ್ಲಿ ಅಧಿಕಾರ ನಡೆಸುತ್ತಿದೆ. ಅಧಿಕಾರಕ್ಕಾಗಿ ಸುಳ್ಳು ಹೇಳುತ್ತಾ ಬಿಜೆಪಿಯು ಜನರನ್ನು ವಂಚಿಸುತ್ತಿದ್ದು, ಕಾಂಗ್ರೆಸ್ ಸತ್ಯದ ಹಾದಿಯಲ್ಲಿ ಸಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಗುವುದು ಎಂದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನುಡಿದಂತೆ ನಡೆದಿದೆ. ರೈತರ ಸಾಲ ಮನ್ನಾ ಮಾಡಿದೆ. ಅನ್ನ ಭಾಗ್ಯದಂತಹ ಕಾರ್ಯಕ್ರಮದ ಮೂಲಕ ಬಡವರಿಗೆ ನೆರವಾಗಿದೆ ಎಂದು ರಾಹುಲ್ ಶ್ಲಾಘಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಾ, ನಮ್ಮದು ನುಡಿದಂತೆ ನಡೆದ ಸರಕಾರವಾಗಿದ್ದು, ಹಿಂದು-ಮುಸ್ಲಿಂ ನಡುವೆ ಕೋಮು ವಿಷ ಬೀಜ ಬಿತ್ತಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗೆ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎನ್ನುವ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸ್ವಾಗತಿಸಿದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ವೀರಪ್ಪ ಮೊಯ್ಲಿ, ಮುನಿಯಪ್ಪ, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಸಚಿವ ಎಸ್.ಆರ್.ಪಾಟೀಲ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವೇಣುನಾಥ್, ಬಿ.ಕೆ.ಹರಿಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಶಾಸಕರಾದ ಅಭಯ ಚಂದ್ರ ಜೈನ್, ಮೊಯ್ದಿನ್ ಬಾವ, ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ವಸಂತ ಬಂಗೇರ, ವಿನಯ ಕುಮಾರ್ ಸೊರಕೆ, ಐವನ್ ಡಿ ಸೋಜ, ಮನಪಾ ಮೇಯರ್ ಭಾಸ್ಕರ ಮೊಯ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.