(ನ್ಯೂಸ್ ಕಡಬ)newskadaba.com, ಅ. 29 ಬೆಂಗಳೂರು: ರೈತರ ಜಮೀನು, ಹಿಂದೂ ದೇವಾಲಯ ಹಾಗೂ ಮಠಗಳು ವಕ್ಫ್ ಆಸ್ತಿ ಎಂದು ನೋಟಿಸ್ ನೀಡುತ್ತಿರುವುದನ್ನು ನೋಡಿದರೆ ಈ ರಾಜ್ಯವನ್ನು ಮಸೀದಿಗಳೇ ನಡೆಸುತ್ತಿರುವ ಹಾಗೆ ಅನಿಸುತ್ತಿದೆ. ಹೀಗಾಗಿ ಕೂಡಲೇ ವಕ್ಫ್ ಬೋರ್ಡ್ ರದ್ದುಪಡಿಸಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಕಲಬುರಗಿಯ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜಾಪುರ, ಯಾದಗಿರಿ, ಕಲಬುರಗಿ, ತುಮಕೂರು, ಚಿತ್ರದುರ್ಗದಲ್ಲಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಹಾಗಾಗಿ, ಮಸೀದಿಗಳು ಆ ಜಾಗ, ಈ ಜಾಗ ನಮಗೆ ಸೇರಿದ್ದು ಎಂದು ಸರ್ಕಾರಕ್ಕೆ ಪತ್ರ ಬರೆದಿವೆ ಎಂದು ಕಿಡಿ ಕಾರಿದ್ದಾರೆ. ಹೀಗೆ ಮಸೀದಿಗಳು ಸರ್ಕಾರ ನಡೆಸುವಂತಹ ಪರಿಸ್ಥಿತಿ ಇವರು ತಂದುಕೊಂಡಿದ್ದಾರೆ. ಹಾಗಾಗಿ, ತಕ್ಷಣ ವಕ್ಫ್ ಬೋರ್ಡ್ ರದ್ದುಪಡಿಸಬೇಕು. ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಇದೆ ಎಂಬುದನ್ನು ವಕ್ಫ್ ಬೋರ್ಡ್ ಮೊದಲು ಘೋಷಿಸಲಿ. ಈ ದೇಶ ಯಾರಪ್ಪನ ಆಸ್ತಿಯೂ ಅಲ್ಲ. ಇದು ಹಿಂದೂಸ್ತಾನ್ ಎಂಬುದನ್ನು ಮರೆಯಬಾರದು. ಇದೇ ರೀತಿ ಮುಂದುವರೆದರೆ ಈ ದೇಶಕ್ಕೆ ಗಂಡಾಂತರ ಒದಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.