ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ► “ಎಗ್ರಿಕಲ್ಚರಿಸ್ಟ್” ಫೇಸ್‍ಬುಕ್ ಗುಂಪಿನಿಂದ ರಾಜಕೀಯ ಪಕ್ಷಗಳಿಗೆ ಮನವಿ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.20. ಅನೇಕ ವರ್ಷಗಳಿಂದ ಸರಕಾರಗಳು ರೈತರಿಗೆ ಸಾಲಮನ್ನಾ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದರೂ, ರೈತರ ಅನೇಕ ಬೇಡಿಕೆಗಳು ಇನ್ನೂ ಬಾಕಿಯಾಗಿವೆ. ಅದು ಜನಪ್ರತಿನಿಧಿಗಳನ್ನು ತಲಪದೇ ಇದ್ದುದರಿಂದ ಎಗ್ರಿಕಲ್ಚರಿಸ್ಟ್ ಫೇಸ್‌ಬುಕ್‌ ಗುಂಪು ಯುವ ರೈತರು ಹಾಗೂ ರೈತರ ಜೊತೆ ಸಂವಹನ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ರೈತರ ಬೇಡಿಕೆಯನ್ನು ಪರಿಗಣಿಸಿ ಮುಂದೆ ಬರುವ ಸರಕಾರಗಳು ಜಾರಿ ಮಾಡಬೇಕೆಂದು ಹಾಗೂ ವಿವಿಧ ಪಕ್ಷಗಳು ಈ ಕುರಿತು ಮುಂಬರುವ ಚುನಾವಣೆಯ ದೃಷ್ಟಿಯಿಂದ ತಮ್ಮ ಪ್ರಣಾಳಿಕೆಯಲ್ಲಿ ಅದನ್ನು ಅಳವಡಿಸಬೇಕೆಂದು ಎಗ್ರಿಕಲ್ಚರಿಸ್ಟ್ ಫೇಸ್‌ಬುಕ್‌ ಗುಂಪಿನ ಅಡ್ಮಿನ್ ರಮೇಶ್ ಪೆರ್ಲಂಪಾಡಿ ಹೇಳಿದ್ದಾರೆ.

ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷಿಕರ ಜತೆ ಪರಸ್ಪರ ಸಂವಹನದ ಉದ್ದೇಶದಿಂದ ಕೃಷಿ ಗುಂಪೊಂದನ್ನು ಹುಟ್ಟುಹಾಕುವ ಯೋಚನೆಗಳಿಗೆ ಸಮಾನ ಆಸಕ್ತರು ಸ್ಪಂದಿಸಿದ ಹಿನ್ನೆಲೆಯಲ್ಲಿ ನೂತನ ಗುಂಪು ರಚಿಸಲಾಗಿದ್ದು, ಈ ಗುಂಪಿನಲ್ಲಿ ಕೃಷಿ ಪದ್ಧತಿಗೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನಗಳ ಮಾಹಿತಿಗಳು, ಕೃಷಿ ವಿಚಾರಗಳ ವಿನಿಮಯ ಮತ್ತು ಯುವಕರನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ರೂಪುಗೊಳಿಸಲಾಗಿದೆ. ಗುಂಪಿಗೆ 7 ವರ್ಷ ಸಂದಿದ್ದು, ಒಟ್ಟು 2.27 ಲಕ್ಷ ಮಂದಿ ನಾನಾ ದೇಶ ಸೇರಿದಂತೆ ರಾಜ್ಯದ, ಜಿಲ್ಲೆಯ ಮಂದಿ ಗುಂಪಿನಲ್ಲಿ ಇದ್ದಾರೆ. ಕಳೆದ 27 ದಿನಗಳ ಅವಧಿಗೆ ಸಂಬಂಧಿಸಿ 2.3 ಲಕ್ಷ ಮಂದಿ ಸಕ್ರೀಯರಾಗಿ ಗುಂಪಿನ ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದ ಅವರು ಮುಂದಿನ ಸರಕಾರ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಕೃಷಿ ಬಳಕೆಯ ಪಂಪ್‌ಸೆಟ್‌ಗಳಿಗೆ ದಿನಪೂರ್ತಿ ವಿದ್ಯುತ್ ಸರಬರಾಜು, ಎಲ್ಲಾ ಕೃಷಿ ಉತ್ಪನ್ನಗಳಿಗೆ ಪೂರ್ವನಿಗದಿತ ಮಾರುಕಟ್ಟೆ ದರ ಘೋಷಣೆ, ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ, ಇಲಾಖೆಗಳಲ್ಲಿ ರೈತರು ಅಪೇಕ್ಷಿಸುವ ಕೃಷಿ ಸಂಬಂಧಿತ ಏಕದಾಖಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಧಾರಣೆಗಳು ಇಳಿಕೆಯಾದಾಗ ತಕ್ಷಣ ಬೆಂಬಲ ಬೆಲೆ ಘೋಷಣೆಯಾಗಿ ಕಾರ್ಯರೂಪಕ್ಕೆ ಬರುವಂತೆ ಕ್ರಮ, ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹ, ಅದನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಕೃಷಿಕರಿಗೆ ಆರ್ಥಿಕ ಬೆಂಬಲ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಳೆಗಾರ – ಬಳಕೆದಾರರ ನಡುವಿರುವ ಮಧ್ಯವರ್ತಿಗಳ ಸಂಖ್ಯೆಗಳನ್ನು ಕಡಿಮೆಗೊಳಿಸುವಂತೆ ಆಗ್ರಹಿಸಲಾಗಿದೆ.

Also Read  ನೂಜಿಬಾಳ್ತಿಲ ಬೆಥನಿ ಕಾಲೇಜಿನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ

ಬಿತ್ತನೆಯ ಪೂರ್ವದಲ್ಲಿ ಸರಕಾರವು ಉತ್ಪನ್ನಕ್ಕಿರುವ ಬೇಡಿಕೆಯನ್ನು ಅಂದಾಜಿಸಿ ಖರೀದಿಯ ಜವಾಬ್ದಾರಿ ತೆಗೆದುಕೊಳ್ಳಬೇಕು. ಕೃಷಿ ಕಾರ್ಮಿಕರಿಗೆ ಪಿಂಚಣಿ ಯೋಜನೆಯ ಅನುಷ್ಠಾನ, ಮರಳಿ ಕೃಷಿಗೆ ಬರುವ ವಿದ್ಯಾವಂತರಿಗೆ ಪ್ರೋತ್ಸಾಹ, ತಾಂತ್ರಿಕ ಮಾಹಿತಿಗಳ ಲಭ್ಯತೆ, ಹಳ್ಳಿ ಉತ್ಪನ್ನಗಳ ಸ್ಥಳೀಯ ಮೌಲ್ಯವರ್ಧನೆಗೆ ಮತ್ತು ಮಾರಾಟಕ್ಕೆ ಆರ್ಥಿಕ ಪ್ರೋತ್ಸಾಹ, ಪ್ರತೀ ಗ್ರಾಮ ಮಟ್ಟದಲ್ಲಿ ಕೃಷಿಕರಿಗೆ ಕೃಷಿ ತಾಂತ್ರಿಕ ಮಾಹಿತಿಗಳ ಲಭ್ಯತೆಗೆ ವಿಜ್ಞಾನ ಪದವೀಧರರ ನೇಮಕ, ಜಲಮರುಪೂರಣ ವ್ಯವಸ್ಥೆ ಕಡ್ಡಾಯ ಮಾಡುವುದು, ತಾಲೂಕು ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಬೃಹತ್ ದಾಸ್ತಾನು ಕೊಠಡಿಗಳ ನಿರ್ಮಾಣ, ಹೈನುಗಾರಿಕೆ ಹಾಗೂ ಅದರ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ, ಸಹಕಾರಗಳು ಕೃಷಿಕರ ಸಲಹೆಗಳು, ದಯವಿಟ್ಟು ಪರಿಗಣಿಸುವಂತೆ ರಾಜಕೀಯ ಪಕ್ಷಗಳಿಗೆ ಮನವಿ ಮಾಡಲಾಗುವುದು ಎಂದರು.

Also Read  ಕಸ ಎಸೆತ - ಎಂಸಿಸಿಯಿಂದ ದಂಡ ವಸೂಲು

ಪತ್ರಿಕಾಗೋಷ್ಠಿಯಲ್ಲಿ ಎಗ್ರಿಕಲ್ಚರಿಸ್ಟ್ ಗ್ರೂಪ್‌ನ ಪ್ರಥಮ ಎಡ್ಮಿನ್ ಮಹೇಶ್ ಪುಚ್ಚಪ್ಪಾಡಿ, ಸದಸ್ಯ ಮಹೇಶ್ ಪ್ರಸಾದ್ ನಿರ್ಕಜೆ, ಕೆ.ಪಿ.ಸುಬ್ರಹ್ಮಣ್ಯಂ ಉಸಪ್ಥಿತರಿದ್ದರು.

error: Content is protected !!
Scroll to Top