(ನ್ಯೂಸ್ ಕಡಬ) newskadaba.com ಕಡಬ, ಮಾ.19. ಸೋಮವಾರ ಸಂಜೆ ಆಲಂಕಾರು ವ್ಯಾಪ್ತಿಯಲ್ಲಿ ಬೀಸಿದ ಭಾರೀ ಬಿರುಗಾಳಿ ಮಳೆಗೆ ಶರವೂರು ಸರಕಾರಿ ಶಾಲೆಯ ಮೇಲ್ಛಾವಣಿ ಸೇರಿದಂತೆ ಒಂದು ಮನೆ ಮತ್ತು ಅಪಾರ ಪ್ರಮಾಣದ ಅಡಿಕೆ ತೋಟ ನಾಶವಾಗಿದೆ.
ಸೋಮವಾರ ಸಂಜೆ ವೇಳೆಗೆ ಗಾಳಿ ಮಳೆ ಬೀಸಿದ್ದರಿಂದಾಗಿ ಶರವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಂಚು ತುಂಡಾಗಿ ತರಗತಿಯೊಳಗೆ ಬಿದ್ದಿದ್ದು, ಕಂಗಾಲಾದ ಕೆಲವು ಮಕ್ಕಳು ತರಗತಿಯಿಂದ ಓಡಿ ಪಕ್ಕದ ಮನೆ ಸೇರಿದಂತೆ ರಂಗ ಮಂದಿರದಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೊಂದೆಡೆ ಶರವೂರು ನಿವಾಸಿ ಕೇಪು ಅಜಿಲರವರ ಮನೆಗೆ ಬೃಹತ್ ಗಾತ್ರದ ಹಲಸಿನ ಮರ ಬಿದ್ದು ಹಾನಿಯಾಗಿದೆ. ಮನೆಯ ಯಜಮಾನ ಕೇಪು ಅಜಿಲ ಮತ್ತು ಮನೆಯ ಹಿರಿಯ ಮಗ ಮನೋಹರ್ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಇತ್ತ ಸೋಮವಾರದ ಭಾರೀ ಗಾಳಿಯಿಂದಾಗಿ ಮನೆ ಸಂಪೂರ್ಣ ನಾಶವಾಗಿದೆ. ಶರವೂರು, ಕಕ್ವೆ, ನಗ್ರಿ ವ್ಯಾಪ್ತಿಯ ಸುಮಾರು 15ಕ್ಕೂ ಅಧಿಕ ವಿದ್ಯುತ್ ಕಂಬಗಳು ಮರ ಬಿದ್ದ ಪರಿಣಾಮ ಧರೆಗುರುಳಿದೆ. ಇದರ ಪರಿಣಾಮ ಮುಂದಿನ ಕೆಲ ದಿನಗಳ ಕಾಲ ವಿದ್ಯುತ್ ಅಭಾವ ಉಂಟಾಗಲಿದೆ. ಭಾರಿ ಪ್ರಮಾಣದ ಗಾಳಿಯ ಪರಿಣಾಮ ನಗ್ರಿ, ಶರವೂರು, ಕಕ್ವೆ ವ್ಯಾಪ್ತಿಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಅಡಿಕೆ ಮರಗಳು ಗಾಳಿಗೆ ನಾಶವಾಗಿದೆ. ಜೊತೆಗೆ ಶರವೂರು ಪರಮೇಶ್ವರ ಗೌಡ, ಕಂದ್ಲಾಜೆ ಗಣೇಶ್ ದೇವಾಡಿಗರವರ ಹಟ್ಟಿ ಹಾಗೂ ಕೊಟ್ಟಿಗೆಗೆ ಮರ ಬಿದ್ದು ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಅಲ್ಲದೆ ಶರವೂರು ನಡಿಮಾರು ನಿವಾಸಿ ಸೀತಾರಾಮರವರ ಅಟೋ ರಿಕ್ಷಾದ ಮೇಲೂ ಮರ ಬಿದ್ದು ರಿಕ್ಷಾ ಜಖಂಗೊಂಡಿದೆ.
ಭಾರಿ ಪ್ರಮಾಣದಲ್ಲಿ ಮರ ಗಾಳಿಗೆ ಬಲಿಯಾದ ಪರಿಣಾಮ ಕಂದ್ಲಾಜೆ, ಆಲಂಕಾರು ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡ ಆಲಂಕಾರಿನ ನಿವಾಸಿಗಳು ತಕ್ಷಣ ಸ್ಪಂದಿಸಿ ಮರ ತೆರವುಗೊಳಿಸುವ ಕಾರ್ಯ ನಡೆಸಿದರು. ಬಳಿಕ ಜೇಸಿಬಿ ಯಂತ್ರವನ್ನು ಬಳಸಿ ಮರ ತೆರವುಗೊಳಿಸಿದರು. ಘಟನಾ ಸ್ಥಳಕ್ಕೆ ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಆಲಂಕಾರು ಗ್ರಾ.ಪಂ. ಸದಸ್ಯ ಕೇಶವ ಗೌಡ ಆಲಡ್ಕ, ಯಾದವೇಂದ್ರ ರಾವ್, ಗ್ರಾಮಕರಣಿಕ ಸಹಾಯಕ ವಿಶ್ವನಾಥ ಮೊದಲಾದವರು ಭೇಟಿ ನೀಡಿ ನಷ್ಟ ಪರಿಶೀಲಿಸಿದರು.