(ನ್ಯೂಸ್ ಕಡಬ) newskadaba.com ಅ.25, ಬೆಂಗಳೂರು: ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಶಿಕ್ಷಕರು, ಸಂಘ-ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಲಿ, ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಲಿ, ಹಾಗೂ ಪದಾಧಿಕಾರಿಯಾಗಲು ಅವಕಾಶವಿರುವುದಿಲ್ಲ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020ರ ಸೆಕ್ಷನ್-8(1) ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ನಿಯಮ-15ರಲ್ಲಿ ಕಲ್ಪಿಸಿರುವ ಅವಕಾಶಗಳಂತೆ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಅಯ್ಕೆಯಾದ ಶಿಕ್ಷಕರನ್ನು ಕೌನ್ಸೆಲಿಂಗ್ ಸ್ಥಳ ನಿಯುಕ್ತಿಗೊಳಿಸಲಾಗಿರುತ್ತದೆ. ಹೊರಡಿಸಲಾಗಿರುವ ಅಧಿಸೂಚನೆಯಂತೆ ಸರ್ಕಾರಿ ಹುದ್ದೆಗಳಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಘ ಸಂಸ್ಥೆ ಮತ್ತು ಇತರೆ ಯಾವುದೇ ಸಹಕಾರ ಸಂಘ-ಸಂಸ್ಥೆಗಳ ಚುನಾಯಿತ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಪದಾಧಿಕಾರಿಗಳು ಸೇರಿ ಯಾವುದೇ ಹುದ್ದೆಯನ್ನು ಹೊಂದಿರಬಾರದು. ಒಂದು ವೇಳೆ ಹೊಂದಿದ್ದಲ್ಲಿ ಆ ಹುದ್ದೆಯನ್ನು ತ್ಯಜಿಸಿ ಆ ಬಗ್ಗೆ ಲಿಖಿತ ಮುಚ್ಚಳಿಕೆಯನ್ನು ನೀಡಿದ ನಂತರ ಅರ್ಜಿಯನ್ನು ಸಲ್ಲಿಸಬೇಕು. ಒಂದು ಬಾರಿ ನಿರ್ದಿಷ್ಟಪಡಿಸಿದ ಹುದ್ದೆಯ ಕರ್ತವ್ಯಕ್ಕೆ ಹಾಜರಾದ ನಂತರ ಮೇಲಿನ ಯಾವುದೇ ಹುದ್ದೆಯನ್ನು ಹೊಂದಲು ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.
ಆದಾಗ್ಯೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಒಗಳು ಪ್ರಸ್ತುತ ಅಧಿಸೂಚಿಸಲಾಗಿರುವ ಸರ್ಕಾರಿ ನೌಕರರ ಚುನಾವಣೆಯಲ್ಲಿ ಮತ್ತು ಪಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಲಿಪಿಕ ನೌಕರರ ಸಂಘದ ಅಧ್ಯಕ್ಷರು ಮನವಿ ಸಲ್ಲಿಸಿದ್ದಾರೆ.