(ನ್ಯೂಸ್ ಕಡಬ) newskadaba.com ಅ.25, ಬೆಂಗಳೂರು: ರಾಜ್ಯದ ಅಧಿಸೂಚಿತ, ದಾಖಲಿತ ಅರಣ್ಯ ದಾಖಲೀಕರಣ ಮತ್ತು ಪರಿಭಾವಿತ ಅರಣ್ಯ ಭೂಮಿಯ ನ್ಯೂನತೆ ಸರಿಪಡಿಸುವ ಸಂಬಂಧ ತಜ್ಞರ ಸಮಿತಿಯನ್ನು 15 ದಿನಗಳಲ್ಲಿ ರಚನೆ ಮಾಡಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆಯವರು ಗುರುವಾರ ಹೇಳಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಈ ವಿಷಯ ತಿಳಿಸಿದರು.
ವನ್ ಸಂರಕ್ಷಣ ಏವಂ ಸಂವರ್ಧನ ಅಧಿನಿಯಮ 1980ರ ನಿಯಮ 16ರಡಿ ಹೊಸದಾಗಿ ತಜ್ಞರ ಸಮಿತಿ ರಚಿಸಲು ಅವಕಾಶವಿದ್ದು, ಈ ಸಮಿತಿ ರಾಜ್ಯದ ಅಧಿಸೂಚಿತ ಮತ್ತು ದಾಖಲಿಸಲಾದ ಅರಣ್ಯ ಪ್ರದೇಶದ ಸಮಗ್ರ ದಾಖಲೀಕರಣ ಮತ್ತು ಪರಿಭಾವಿತ ಅರಣ್ಯ ಪ್ರದೇಶದ ಲೋಪದೋಷ ಸರಿಪಡಿಸಲು ಪರಾಮರ್ಶಿಸಿ 6 ತಿಂಗಳೊಳಗೆ ವರದಿ ಸಲ್ಲಿಸಲಿದೆ ಎಂದು ಹೇಳಿದರು. ಪರಿಭಾವಿತ ಅರಣ್ಯ ಎಂದು ಗುರುತಿಸಿರುವ ಪ್ರದೇಶದಲ್ಲಿ ಅಧಿಸೂಚಿತ ಅರಣ್ಯ, ಪಟ್ಟಾಭೂಮಿ, ಸರಕಾರಿ ಕಚೇರಿ, ಶಾಲೆ ಕಾಲೇಜುಗಳೂ ಇವೆ. ಹೀಗಾಗಿ ಇದರ ಪರಾಮರ್ಶೆ ಆಗಬೇಕು ಎಂಬ ಬೇಡಿಕೆಗಳಿವೆ. ಹೀಗಾಗಿ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಲಾಗುವುದು ಎಂದರು.