(ನ್ಯೂಸ್ ಕಡಬ) newskadaba.com ಅ.24. ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ 415 ಕಿರಿಯ ಪವರ್ ಮ್ಯಾನ್ ಮತ್ತು 34 ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 20/11/2024ರ ತನಕ ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿಯೂ ನೇಮಕಾತಿ ನಡೆಯುತ್ತಿದ್ದು, ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿವೆ.
ಹುದ್ದೆಗಳ ವಿವರ:
ಮೆಸ್ಕಾಂನಲ್ಲಿ 415 ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿ 71, ಪರಿಶಿಷ್ಟ ವರ್ಗ 29, ಸಾಮಾನ್ಯ 183, ಪ್ರವರ್ಗ-1 17, ಪ್ರವರ್ಗ-2ಎ 62, ಪ್ರವರ್ಗ 2-ಬಿ 17, ಪ್ರವರ್ಗ-3ಎ 16, ಪ್ರವರ್ಗ-3ಬಿ 20 ಹುದ್ದೆಗಳಿವೆ.
34 ಬ್ಯಾಕ್ ಲಾಗ್ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿ 4, ಪರಿಶಿಷ್ಟ ವರ್ಗ 1, ಸಾಮಾನ್ಯ 15, ಪ್ರವರ್ಗ-1 3, ಪ್ರವರ್ಗ-2ಎ 5, ಪ್ರವರ್ಗ 2-ಬಿ 2, ಪ್ರವರ್ಗ-3ಎ 2, ಪ್ರವರ್ಗ-3ಬಿ 2 ಹುದ್ದೆಗಳಿವೆ. ಅಧಿಸೂಚಿತ ಅಂಗವಿಕಲತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಈ ಹುದ್ದೆಯನ್ನು ಆಯಾ ಪ್ರವರ್ಗದ ಸಾಮಾನ್ಯ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಕಿರಿಯ ಪವರ್ ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯ (ಸಿ.ಬಿ.ಎಸ್.ಇ/ ಐ.ಸಿ.ಎಸ್.ಇ) ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರಬೇಕು. ಈ ವಿದ್ಯಾರ್ಹತೆ ಹೊರತುಪಡಿಸಿ ಇತರೆ ಯಾವುದೇ ಸಮಾನಾಂತರ ವಿದ್ಯಾರ್ಹತೆ ಪರಿಗಣಿಸುವುದಿಲ್ಲ ಎಂದು ಆದೇಶ ಹೇಳಿದೆ. ಅಲ್ಲದೇ ಬಾಹ್ಯ ಅಥವಾ ಮುಕ್ತ ವಿಶ್ವವಿದ್ಯಾಲಯ ಅಥವಾ ಮುಕ್ತ ಶಾಲೆಯಿಂದ ಪಡೆದ ಎಸ್.ಎಸ್.ಎಲ್.ಸಿ./ 10ನೇ ತರಗತಿ (ಬ್ರಿಡ್ಜ್ ಕೋರ್ಸ್) ಉತ್ತೀರ್ಣತೆ ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅಭ್ಯರ್ಥಿಗಳು ಈ ಮೇಲೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಉತ್ತೀರ್ಣಗೊಂಡಿರತಕ್ಕದ್ದು ಹಾಗೂ ಅಂಕಪಟ್ಟಿಯನ್ನು ಹೊಂದಿರತಕ್ಕದ್ದು ಎಂದು ಸ್ಪಷ್ಟಪಡಿಸಲಾಗಿದೆ.
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಮೇಲಿನ ನಿಗದಿತ ಶೈಕ್ಷಣಿಕ ವಿದ್ಯಾರ್ಹತೆ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು, ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ನೇಮಕಾತಿ ಆದೇಶದಲ್ಲಿ ತಿಳಿಸಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿ 18 ವರ್ಷ ಹೊಂದಿರಬೇಕು, ಗರಿಷ್ಠ ವಯೋಮಿತಿ ಮೀರಿರಬಾರದು. ಸಾಮಾನ್ಯ ವರ್ಗಕ್ಕೆ 35, ಪ್ರವರ್ಗ 2ಎ/ 2ಬಿ/ 3ಎ/ 3ಬಿ 38 ವರ್ಷಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ಇದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡುವುದು ಕಡ್ಡಾಯ. ಒಂದು ವೇಳೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸದಿದ್ದಲ್ಲಿ, ಅಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ.
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿ 590 ರೂ. (ಜಿಎಸ್‌ಟಿ ಸೇರಿ), ಪ್ರವರ್ಗ -1, 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿ 614 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಭ್ಯರ್ಥಿ 378 ರೂ. ಶುಲ್ಕ ಪಾವತಿಸಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಅರ್ಜಿ ಶುಲ್ಕದ ಚಲನ್ ಅನ್ನು ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು, ಅರ್ಜಿ ಶುಲ್ಕವನ್ನು ಕರ್ನಾಟಕ ರಾಜ್ಯದ ಯಾವುದಾದರೂ ಅಂಚೆ ಕಚೇರಿಯ ಮುಖಾಂತರ ಪಾವತಿಸಬೇಕು. ಒಮ್ಮೆ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ, ಅದನ್ನು ಯಾವುದೇ ಸಂದರ್ಭದಲ್ಲಿ ವಾಪಸ್ ನೀಡುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳನ್ನು ವಿದ್ಯುತ್ ಸರಬರಾಜು ಕಂಪನಿಗಳ ನೌಕರಿ ಭರ್ತಿ ಮತ್ತು ಬಡ್ತಿ ನಿಯಮಾವಳಿಗಳ ಕೆಲವು ಷರತ್ತುಗಳಿಗೊಳಪಟ್ಟು 3 ವರ್ಷಗಳ ಅವಧಿಗೆ ತರಬೇತಿಗೆ ಒಳಪಡಿಸಲಾಗುತ್ತದೆ.
ತರಬೇತಿಯ ಅವಧಿಯಲ್ಲಿ, ಕ್ರೋಢೀಕೃತ ಸಂಭಾವನೆಯನ್ನು ಬಿಟ್ಟು, ಇನ್ನಿತರ ಯಾವುದೇ ಭತ್ಯೆ ಹಾಗೂ ಸೌಲಭ್ಯ ಇರುವುದಿಲ್ಲ. ಕ್ರೋಢೀಕೃತ ಸಂಭಾವನೆ 1ನೇ ವರ್ಷ 17,000 ಮಾಸಿಕ, 2ನೇ ವರ್ಷ 19,000 ಮಾಸಿಕ ಮತ್ತು 3ನೇ ವರ್ಷ 21,000 ಮಾಸಿಕ. ಅರ್ಜಿಯನ್ನು ಕಡ್ಡಾಯವಾಗಿ ವಿದ್ಯುತ್ ಸರಬರಾಜು ಕಂಪನಿಯ https://mescom.karnataka.gov.in ವೆಬ್-ಸೈಟ್ ಮೂಲಕ ಸಲ್ಲಿಸಬಹುದಾಗಿರುತ್ತದೆ. ಇತರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು 21.10.2024 ರಿಂದ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಭರ್ತಿ ಮಾಡುವ ಮುನ್ನ ಎಲ್ಲಾ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು ಎಂದು ಮನವಿ ಮಾಡಲಾಗಿದೆ.