(ನ್ಯೂಸ್ ಕಡಬ) newskadaba.com ಅ.23. ಕಾಂಗ್ರೆಸ್ ಪಕ್ಷ ಸೇರಿ ಸಿಪಿ ಯೋಗೇಶ್ವರ್ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ. ಸಿಪಿ ಯೋಗೇಶ್ವರ್ ನಂಬಿಕೆಗೆ ಅಪಚಾರ ಮಾಡಿ ಹೋಗಿದ್ದಾರೆ ಎಂದು ಸಿಪಿವೈ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಇದೀಗ ಸಿಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸಿಪಿ ಯೋಗೇಶ್ವರ್ ಮೊದಲಿಂದಲೂ ಎಲ್ಲ ಪಕ್ಷಗಳ ಜೊತೆ ಲಿಂಕ್ ಇಟ್ಟಿಕೊಂಡವರು. ಕಾಟಾಚಾರಕ್ಕೆ ನಮ್ಮೊಂದಿಗೆ ಇದ್ದರು ಅನ್ನಿಸುತ್ತೆ ಎಂದು ಕಿಡಿಕಾರಿದ್ದಾರೆ.
ಯೋಗೇಶ್ವರ್ ಸೈಕಲ್ ಗುರುತು, ಬಿಎಸ್‌ಪಿ ಎಲ್ಲ ಮುಗಿಸಿಕೊಂಡು ನಮ್ಮ ಪಕ್ಷಕ್ಕೆ ಬಂದವರು. ಅವರು ಸೈದ್ಧಾಂತಿಕವಾಗಿ ನಮ್ಮ ಪಕ್ಷದಲ್ಲಿ ಇದ್ದವರಲ್ಲ. ಚನ್ನಪಟ್ಟಣದಲ್ಲಿ ಬಿಜೆಪಿ ವೋಟ್ ಅಲ್ಲೇ ಇರುತ್ತೆ. ನಾನು, ಪ್ರಹ್ಲಾದ್ ಜೋಶಿ ಅವರು ಜೆಡಿಎಸ್ ಟಿಕೆಟ್ ಅಂತ ಸಿಪಿ ಯೋಗೇಶ್ವರ್ ಅವರಿಗೆ ಹೇಳಿದ್ವಿ. ಹೆಚ್‌ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿ ಎಂದು ಹೇಳಿದ್ದರು. ಆದರೆ, ಸಿಪಿ ಯೋಗೇಶ್ವರ್ ಒಪ್ಪಲಿಲ್ಲ ಎಂದು ಹೇಳಿದರು.
ಯೋಗೇಶ್ವರ್ ಈಗ ಕಾಂಗ್ರೆಸ್‌ಗೆ ಹೋಗಿದ್ದಾರೆ, ಇದು ಪಕ್ಷಕ್ಕೆ ದ್ರೋಹ ಬಗೆದಂತೆ. ರಾಜ್ಯದ ಎಲ್ಲ ಬಿಜೆಪಿ ನಾಯಕರು ಅವರ ಪರವಾಗಿ ಇದ್ದೆವು. ಟಿಕೆಟ್ ಕೊಡಿಸುವ ಸಲುವಾಗಿ ಪ್ರಯತ್ನ ಮಾಡಿದ್ವಿ. ಬಿಜೆಪಿ ಚಿಹ್ನೆ, ಜೆಡಿಎಸ್ ಚಿಹ್ನೆ ಅಂತಲ್ಲ. ಎನ್‌ಡಿಎ ಗೆಲ್ಲುವುದು ಮುಖ್ಯ. ಎನ್‌ಡಿಎನಲ್ಲಿ ಅವರಿಗೆ ಸೀನಿಯಾರಿಟಿ ಇತ್ತು. ಈಗ ಹೋಗಿ ಲಾಸ್ಟ್ನಲ್ಲಿ ಕೂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.