(ನ್ಯೂಸ್ ಕಡಬ) newskadaba.com ಅ.23, ಬೆಂಗಳೂರು . ರಾಜ್ಯದಲ್ಲಿ ಹಸಿರು ಇಂಧನ ಉತ್ಪಾದನೆಗೆ ಒತ್ತು ನೀಡುವ ಸಂಬಂಧ ಇಂಧನ ಇಲಾಖೆ ಜೊತೆಗೂಡಿ ಸೂಕ್ತ ನೀತಿ ರೂಪಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಖನಿಜ ಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಹಸಿರು ಇಂಧನ ಮತ್ತು ಕೋರ್ ಉತ್ಪಾದನಾ ವಲಯಗಳಿಗೆ ಸಂಬಂಧಪಟ್ಟ ಸರ್ಕಾರದ ವಿಷನ್ ಗ್ರೂಪ್ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಸರ ಸ್ನೇಹಿ ಹಸಿರು ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಉತ್ಪಾದನೆಗೆ ವಿಪುಲ ಅವಕಾಶಗಳಿವೆ. ಈ ಸಂಬಂಧ ಇಂಧನ ಮತ್ತು ಕೈಗಾರಿಕಾ ಇಲಾಖೆಗಳು ಜಂಟಿಯಾಗಿ ಚರ್ಚಿಸಿ ರೂಪಿಸಲಾಗುವುದು. ಜತೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಉದ್ಯಮಿಗಳು ಮತ್ತು ಹೂಡಿಕೆದಾರರ ಸಭೆ ನಡೆಸಿ, ಹಸಿರು ಇಂಧನ ಕ್ಷೇತ್ರದ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.