(ನ್ಯೂಸ್ ಕಡಬ) newskadaba.com ಅ.23. ರಾಜ್ಯ ವಿಪತ್ತು ತಗ್ಗಿಸುವಿಕೆ ಅನುದಾನದಿಂದ ಜಿಲ್ಲೆಯಲ್ಲಿ ಪದೇ ಪದೇ ಸಂಭವಿಸುವ ಪ್ರಾಕೃತಿಕ ವಿಕೋಪ ಅನಾಹುತಗಳನ್ನು ಗುರುತಿಸಿ ಅವುಗಳ ಅಪಾಯ ತಗ್ಗಿಸಲು ಅಗತ್ಯ ಯೋಜನೆಗಳನ್ನು ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಿಟಿಗೇಶನ್ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಹಾಗೂ ಕಡಲತೀರದ ನಿರ್ವಹಣಾ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಂಡಮಾರುತ, ಭೂಕುಸಿತ, ಸಿಡಿಲು, ನೆರೆ ಮುಂತಾದ ಪ್ರಾಕೃತಿಕ ವಿಕೋಪಗಳ ಅಪಾಯವನ್ನು ತಗ್ಗಿಸಲು ಈ ಅನುದಾನವನ್ನು ಬಳಸಿ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದೆ. ನೆರೆ ನೀರು ವ್ಯವಸ್ಥಿತವಾಗಿ ಹರಿದು ಹೋಗಲು ಸೂಕ್ತ ಡ್ರೈನೇಜ್ ವ್ಯವಸ್ಥೆ, ಅಪಾಯವನ್ನು ಕಡಿಮೆ ಮಾಡಲು ಪ್ರಾಕೃತಿಕ ಯೋಜನೆಗಳನ್ನು ಕಂಡುಹಿಡಿದು ಜಾಗೃತಿ ಮೂಡಿಸುವುದು ಹಾಗೂ ಸ್ಥಳೀಯ ಮೂಲಸೌಲಭ್ಯಗಳನ್ನು ಸುಧಾರಿಸಿ ಬಲಪಡಿಸುವುದು ಇದರಲ್ಲಿ ಸೇರಿದೆ ಎಂದು ಅವರು ತಿಳಿಸಿದರು.
ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡು ಸಂಭಾವ್ಯ ಪ್ರಾಕೃತಿಕ ಅಪಾಯಗಳನ್ನು ತಡೆಗಟ್ಟುವುದು ಹಾಗೂ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಂಭಾವ್ಯ ಅಪಾಯ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಸಮರ್ಪಕ ವಿವರಣೆಯೊಂದಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸೂಚಿಸಿದರು. ಕಾಮಗಾರಿಗಳಿಂದ ಯಾವ ರೀತಿ ಸಾರ್ವಜನಿಕರಿಗೆ ಮತ್ತು ಜಿಲ್ಲಾಡಳಿತಕ್ಕೆ ಅನುಕೂಲವಾಗಲಿದೆ ಎಂಬುದರ ಬಗ್ಗೆ ವಿವರಣೆ ಹಾಗೂ ಅಂದಾಜು ಪಟ್ಟಿಯೊಂದಿಗೆ ಮಾಹಿತಿ ನೀಡಲು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಜಿ ಸಂತೋಷ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪದೇ ಪದೇ ನೆರೆನೀರು ನಿಂತು ತೊಂದರೆಗಳಾಗುವ ಪ್ರದೇಶಗಳಲ್ಲಿ ವಿಪತ್ತು ತಗ್ಗಿಸುವಿಕೆ ಅನುದಾನವನ್ನು ಬಳಸಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದಿಂದ ಎಪಿಎಂಸಿ ಮೂಲಕ ಹಾದುಹೋಗುವ ರಾಜಕಾಲುವೆ ಸಮರ್ಪಕವಾಗಿಲ್ಲದೇ ಹಲವು ವರ್ಷಗಳಿಂದ ಕೈಗಾರಿಕಾ ಪ್ರದೇಶದಲ್ಲಿ ನೆರೆ ಉಂಟಾಗುತ್ತಿದೆ. ಅದೇ ರೀತಿ ಮರವೂರು ಕಿಂಡಿ ಅಣೆಕಟ್ಟು, ಹಿನ್ನೀರು ಪ್ರದೇಶ ಅದ್ಯಪಾಡಿಯಲ್ಲಿ ನೆರೆ ಉಂಟಾಗುತ್ತಿದೆ. ಮಿಟಿಗೇಷನ್ ಅನುದಾನದಲ್ಲಿ ಇಲ್ಲಿನ ನೆರೆ ನಿಯಂತ್ರಣಕ್ಕೆ ಅಗತ್ಯ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲು ಅವರು ಸೂಚಿಸಿದರು.
ಕಡಲ ತೀರ ನಿರ್ವಹಣೆ: ಜಿಲ್ಲೆಯ 11 ಸ್ಥಳಗಳಲ್ಲಿ ಕಡಲ ಕೊರೆತ ಸಮಸ್ಯೆ ನಿವಾರಣೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧೀನದ ರಾಷ್ಟ್ರೀಯ ಸಮರ್ಥನೀಯ ಕರಾವಳಿ ನಿರ್ವಹಣಾ ಕೇಂದ್ರವು (NCSCM) ಅಧ್ಯಯನ ನಡೆಸಿ 11 ಸ್ಥಳಗಳಲ್ಲಿ ವಿವಿಧ ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೊಳಿಸಲು ಸೂಚಿಸಿದೆ ಎಂದು ಸಭೆಯಲ್ಲಿ ಬಂದರು ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಟ್ಟಿ ಮತ್ತು ಮರಳು ಪೋಷಣೆಯ ಮೂಲಕ ಕಡಲ ತೀರದ ಕಡಲ ಕೊರೆತವನ್ನು ನಿರ್ವಹಿಸಲು ವರದಿಯಲ್ಲಿ ತಿಳಿಸಲಾಗಿದೆ. ಕಡಲ ತೀರ ನಿರ್ವಹಣೆ ಯೋಜನೆ ರೂಪಿಸದೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದೆಂದು ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ಈಗಾಗಲೇ ಎಡಿಬಿ ಯೋಜನೆಯ ಟ್ರಂಚ್-3 ಅಡಿಯಲ್ಲಿ 355 ಕೋಟಿ ರೂಪಾಯಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಸಮನ್ವಯಾಧಿಕಾರಿ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.