ಕಡಬ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕಡಬ, .22. ದ.ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಬಂಟ್ರ ಕ್ಲಸ್ಟರ್ ಹಾಗೂ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ ಇದರ ಸಂಯುಕ್ತ ಆಶ್ರಯದಲ್ಲಿ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಜರಗಿದ ಕಡಬ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟವನ್ನು ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಸುಬ್ರಹ್ಮಣ್ಯ ಇದರ ಕಾರ್ಯದರ್ಶಿಗಳಾದ ಶ್ರೀಕೃಷ್ಣ ಶರ್ಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಾನಸಿಕ ಹಾಗೂ ಶಾರೀರಿಕ ದೃಢತೆಯನ್ನು ಕಾಪಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಸ್ಪರ್ಧೆಯಲ್ಲಿ ಸೋಲು- ಗೆಲುವು ಸಹಜ. ಸೋತಾಗ ಎದೆಗುಂದದೆ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು. ಗೆದ್ದಂತಹ ಕ್ರೀಡಾಪಟುಗಳು ಕೂಡಾ ಮುಂದಿನ ಹಂತಗಳಿಗೆ ಇನ್ನಷ್ಟು ಸಾಧನೆಯನ್ನು ಮಾಡಿ ಎಂದು ನುಡಿದರು.

ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕರು ಹಾಗೂ ಪೂಜನೀಯ ಧರ್ಮಗುರುಗಳಾದ ರೆ.ಫಾ.ಪ್ರಕಾಶ್ ಪೌಲ್ ಡಿ’ ಸೋಜಾ ಅಧ್ಯಕ್ಷತೆ ವಹಿಸಿದ್ದರು. ಸೈಂಟ್ ಆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ರೆ.ಫಾ.ಅಮಿತ್ ಪ್ರಕಾಶ್ ರೋಡ್ರಿಗಸ್ ಧ್ವಜಾರೋಹಣಗೈದರು. ಕಡಬ ವಲಯದ ಕ್ರೀಡಾ ನೋಡಲ್ ಅಧಿಕಾರಿ ಲೋಕೇಶ್, ಬಂಟ್ರ ಉನ್ನತೀಕರಿಸಿದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶೇಖರ್ ಅತ್ನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ಬಂಟ್ರ, ಕ್ಲಸ್ಟರ್ ನ ಸಿ.ಆರ್.ಪಿ ಶ್ರೀಕುಮಾರ್, ನೂಜಿಬಾಳ್ತಿಲ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಬೇಬಿ, ಕಡಬ ಹಾಗೂ ನೂಜಿಬಾಳ್ತಿಲ ಸಿ.ಆರ್.ಪಿ ಗಣೇಶ್ ನೆಡ್ವಾಲ್, ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವೇದಾವತಿ, ಮರ್ಧಾಳ ಗುಡ್ ಶೆಪರ್ಡ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಿಯಾ ಸಿ.ಟಿ, ಸರಕಾರಿ ಪ್ರಾಥಮಿಕ ಶಾಲೆ ಕೊಣಾಜೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ ಅಮೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮರ್ಧಾಳ ಪ್ರೌಢಶಾಲೆಯ ಮುಖ್ಯಗುರುಗಳಾದ ಈಶೋ ಪಿಲಿಪ್ ಸ್ವಾಗತಿಸಿದರು. ಬಂಟ್ರ ಕ್ಲಸ್ಟರ್ ಸಿ.ಆರ್.ಪಿ ಶ್ರೀಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯ ಗುರುಗಳಾದ ಸತ್ಯಶಂಕರ್ ಭಟ್ ವಂದಿಸಿದರು. ಬಿಳಿನೆಲೆ ವೇದವ್ಯಾಸ ವಿದ್ಯಾಲಯದ ಶಿಕ್ಷಕ ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಕಡಬ ವಲಯದ ವಿವಿಧ ಶಾಲೆಗಳಿಂದ ಸುಮಾರು 940 ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

Also Read  ಬಂಟ್ವಾಳ ಘಟಕದಲ್ಲಿ ವನಮಹೋತ್ಸವ ➤ ಆಯುಷ್ ಇಲಾಖೆಯಿಂದ ಕೋವಿಡ್-19 ರೋಗ ನಿರೋಧಕ ಮಾತ್ರೆಗಳ ವಿತರಣೆ

 

 

 

error: Content is protected !!
Scroll to Top