“ವಿಶ್ವ ಪೊಲಿಯೋ ದಿನ- ಅಕ್ಟೋಬರ್-24”; ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಅ. 22. ಪೊಲಿಯೋ ಎನ್ನುವ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಮತ್ತು ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗುವ ರೋಗವಾಗಿದ್ದು, ಲಸಿಕೆಯಿಂದ ತಡೆಗಟ್ಟಲು ಸಾಧ್ಯವಿದೆ. ಪ್ರತಿ ವರ್ಷ ಅಕ್ಟೋಬರ್ -24 ರಂದು “ವಿಶ್ವ ಪೊಲಿಯೋ ದಿನ”  ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪೊಲಿಯೋ ರೋಗಕ್ಕೆ ಮೊತ್ತ ಮೊದಲ ಬಾರಿ ಲಸಿಕೆ ಕಂಡು ಹಿಡಿದ ಸಂಶೋಧಕ ಶ್ರೀ ಜೋನಾಡ್ ಸಾಲ್ ಅವರ ಹುಟ್ಟಿದ ದಿನವನ್ನು ಅವರ ನೆನಪಿಗಾಗಿ ಪೊಲಿಯೋ ದಿನ ಎಂದು ಆಚರಿಸಲಾಗುತ್ತಿದೆ.

1955 ರಲ್ಲಿ ಈ ಲಸಿಕೆ ಬಳಸಲಾಯಿತು. ಆ ಬಳಿಕ 1961ರಲ್ಲಿ ಶ್ರೀ ಆಲ್ಬರ್ಟ್ ಸಾಬಿನ್ ಎಂಬಾತ ಬಾಯಿಯಿಂದ ಬಳಸುವ ಪೊಲಿಯೋ ವೈರಾಣು ಡ್ರಾ ಹನಿಗಳನ್ನು ಕಂಡು ಹಿಡಿದ. ಪೊಲಿಯೋ ವೈರಾಣು ನೇರವಾಗಿ ನರಮಂಡಲಕ್ಕೆ ದಾಳಿ ಮಾಡಿ ರೋಗಿಯನ್ನು ಇನ್ನಿಲ್ಲದಂತೆ ಕಾಡುತ್ತದೆ. ಪ್ರತೀ 200ರಲ್ಲಿ ಒಬ್ಬರು ಶಾಶ್ವತವಾಗಿ ಪಾರ್ಶ್ವವಾಯುಗೆ ತುತ್ತಾಗುವಂತೆ  ಮಾಡುತ್ತದೆ. ರೋಟರಿ ಅಂತರಾಷ್ಟ್ರೀಯ ಸಂಸ್ಥೆ ಈ ಪೊಲಿಯೋ ರೋಗವನ್ನು ನಿರ್ಮೂಲನೆ ಮಾಡಲು ಒಂದು ವಿಶ್ವ ಪೊಲಿಯೋ ನಿರ್ಮೂಲನಾ ಆಂದೋಲನವನ್ನು 1988ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜೊತೆಗೂಡಿ ಆರಂಭಿಸಿತ್ತು. 1988ರಲ್ಲಿ ವಿಶ್ವದಾದ್ಯಂತ 3,50,000 ಪೊಲಿಯೋ ರೋಗಿಗಳು ಇದ್ದರು. ಇದೀಗ ಅಮೇರಿಕಾ ಯುರೋಫ್ ಏಷ್ಯಾಖಂಡದ ಹೆಚ್ಚಿನ ಎಲ್ಲಾ ದೇಶಗಳು ಪೊಲಿಯೋ ಮುಕ್ತವಾಗಿದೆ. ಆದರೆ ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ನೈಜೀರಿಯಾ ದೇಶಗಳಲ್ಲಿ ಮಾತ್ರ ಪೊಲಿಯೋ ಉಳಿದುಕೊಂಡಿದೆ. 2014ರಲ್ಲಿ ವಿಶ್ವಸಂಸ್ಥೆ ನಮ್ಮ ಭಾರತ ದೇಶವನ್ನು ಪೊಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಿದೆ. ಕಳೆದ 9 ವರ್ಷಗಳಿಂದ ನಮ್ಮ ಭಾರತ ದೇಶದಲ್ಲಿ ಒಂದೇ ಒಂದು ಹೊಸ ಪೊಲಿಯೋ ರೋಗ  ವರದಿಯಾಗಿಲ್ಲ. 1988ರಲ್ಲಿ ಸುಮಾರು 125 ರಾಷ್ಟ್ರಗಳಲ್ಲಿ ಪೊಲಿಯೋ ರೋಗ ಇತ್ತು. ಈಗ 2020ರಲ್ಲಿ ಕೇವಲ 3 ರಾಷ್ಟ್ರಗಳಲ್ಲಿ ಈ ರೋಗ ಇದೆ. ಈ ಮೂರು ದೇಶಗಳಲ್ಲಿ 73 ಪೊಲಿಯೋ ರೋಗಿಗಳು ಪತ್ತೆಯಾಗಿದ್ದಾರೆ.

Also Read  ಮುಂದಿನ ಲಾಕ್ಡೌನ್ ನಿರ್ಧಾರದಿಂದ ಅನ್ಲಾಕ್ ಆದ ಕೇಂದ್ರ ಸರಕಾರ >ಲಾಕ್ಡೌನ್ ನಿರ್ಧರಿಸಲಿದೆಯೇ? ರಾಜ್ಯ ಸರಕಾರ

ಹೇಗೆ ಆಚರಿಸಲಾಗುತ್ತದೆ?

ವಿಶ್ವದಾದ್ಯಂತ ಪೊಲಿಯೋ ರೋಗದ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಬೀದಿ ನಾಟಕ, ಭಾಷಣ ಸ್ಪರ್ಧೆ, ನಾಕ್‍ ಡ್ಯಾನ್, ಮ್ಯಾರಥಾನ್, ರ್ಯಾಲಿಗಳು ಮತ್ತು ಸೆಮಿನಾರ್‍ ಗಳನ್ನು ಆಯೋಜನೆ ಮಾಡಿ ರೋಗದ ತೀವ್ರತೆ  ಮತ್ತು ಗಂಭೀರತೆ ಬಗ್ಗೆ ಜನರಲ್ಲಿ ತಿಳುವಳಿಕೆ  ಮೂಡಿಸಲಾಗುತ್ತಿದೆ.

ಏನಿದು ಪೊಲಿಯೋ?

ಪೊಲಿಯೋ ವೈರಾಣುವಿನಿಂದ  ಹರಡುವ ಸಾಂಕ್ರಾಮಿಕ ಮತ್ತು ಗಂಭೀರ ಕಾಯಿಲೆಯಾಗಿದ್ದು, ಮುಖ್ಯವಾಗಿ ನರಮಂಡಲವನ್ನು ಭರಿಸುತ್ತದೆ. ಈ ವೈರಾಣು ಮುಖ್ಯವಾಗಿ ಸೋಂಕಿತ ವ್ಯಕ್ತಿಯ ಮಲದಿಂದ, ಕಲುಷಿತ ನೀರಿನಿಂದ ಹರಡುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬನಿಗೆ ಸೀನುವಾಗ ಮತ್ತು ಕೆಮ್ಮಿದಾಗ ಹರಡಬಹುದು. ಯಾವುದೇ ವಯಸ್ಸಿನ ವ್ಯಕ್ತಿಗಳಿಗೆ ಬರಬಹುದಾದರೂ ಗರ್ಭಿಣಿಯರು, ಸಣ್ಣ ಮಕ್ಕಳು ಮತ್ತು ರೋಗ ಲಕ್ಷಣ ವ್ಯವಸ್ಥೆ ಹದಗೆಟ್ಟವರನ್ನು ಬಾಧಿಸುತ್ತದೆ. ಎರಡು ರೀತಿಯಲ್ಲಿ ಈ ರೋಗ  ಕಂಡು ಬರುತ್ತದೆ. ಕೇಂದ್ರೀಯ ನರಮಂಡಲವನ್ನು ಬಾಧಿಸಿದ ಪೊಲಿಯೋ ಸಣ್ಣ ಮಟ್ಟಿನ ಜ್ವರ ಮತ್ತು ವಾಂತಿ, ತಲೆನೋವು ಇತ್ಯಾದಿಗಳಿಗೆ ಸೀಮಿತವಾಗಿರುತ್ತದೆ. ಇದನ್ನು ‘ಅಬಾರ್ಟಿನ್ ಪೊಲಿಯೋ ಮೈಲೈಟಿಸ್’ ಎನ್ನುತ್ತಾರೆ. ಇನ್ನೊಂದು ನೇರವಾಗಿ ಕೇಂದ್ರೀಯ ನರಮಂಡಲವನ್ನು ಬಾಧಿಸಿ ದೇಹದ ಮೇಲಿನ ನಿಯಂತ್ರಣ ತಪ್ಪುವಂತೆ ಮಾಡುತ್ತದೆ. ಸ್ನಾಯುಗಳು ಸೆಳೆದುಕೊಂಡು ತೀವ್ರವಾಗಿ ಕಾಡುತ್ತದೆ. ಹೆಚ್ಚಾಗಿ 95 ಶೇಕಡಾ ಪೊಲಿಯೋಗಳಲ್ಲಿ ಯಾವುದೇ ತೀವ್ರತೆ ಚಿಹ್ನೆಗಳು ಕಾಣಿಸದೇ ಇರಬಹುದು. ಸುಮಾರು 5ರಿಂದ 10 ಶೇಕಡಾ ಮಂದಿ ಉಸಿರಾಟದ ಸ್ನಾಯುಗಳ ವೈಫಲ್ಯದಿಂದ ಸಾವನ್ನಪ್ಪಬಹುದು. ಹೆಚ್ಚಿನವರಲ್ಲಿ ಸ್ನಾಯುಗಳು ಮೇಲಿನ ಶಾಶ್ವತ ಹಾನಿಯಿಂದಾಗಿ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು.

Also Read  ಶುಭ ಕಾರ್ಯಗಳಲ್ಲಿ ಹಿನ್ನಡೆಯೇ ? ಹೀಗೆ ಮಾಡಿ.

ತಡೆಗಟ್ಟುವುದು ಹೇಗೆ?

ಚಿಕಿತ್ಸೆ ಇಲ್ಲದ ಈ ರೋಗಕ್ಕೆ ಲಸಿಕೆ ಹಾಕಿಸುವುದರಲ್ಲಿಯೇ ಜಾಣತನ ಅಡಗಿದೆ. ಸರಿಯಾದ ಸಮಯದಲ್ಲಿ ವೈದ್ಯರ ಸೂಚನೆಯಂತೆ ಲಸಿಕೆ ಹಾಕಿಸಿದಲ್ಲಿ ಪೊಲಿಯೋ ಬರುವ ಸಾಧ್ಯತೆ ಇಲ್ಲ. ನಿಸ್ತೇಜಗೊಂಡ ಪೊಲಿಯೋ ವೈರಾಣುವನ್ನು ಬಾಯಿ ಮುಖಾಂತರ ಪೊಲಿಯೋ ಡ್ರಾಫ್ಸ್ ಅಥವಾ ಹನಿ ನೀಡಲಾಗುತ್ತದೆ. ಈ ರೀತಿ ಹನಿ ನೀಡುವುದರಿಂದ ಮಕ್ಕಳಲ್ಲಿ ಪೊಲಿಯೋ ವೈರಾಣುವನ್ನು ಎದುರಿಸುವ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಸಾಮಾನ್ಯವಾಗಿ 5 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ ಈ ಲಸಿಕೆ ನೀಡಲಾಗುತ್ತದೆ.

ಕೊನೆಮಾತು

ಪೊಲಿಯೋ ರೋಗ ಭಾರತ ದೇಶದಿಂದ ನಿರ್ಮೂಲನೆ ಆಗಿದ್ದರೂ ನಿರಂತರವಾಗಿ ಲಸಿಕೆ ಹಾಕುವುದು ಅನಿವಾರ್ಯ. ಈ ನಿಟ್ಟಿನಲ್ಲಿ ರೋಟರಿ, ಲಯನ್ಸ್ ಮತ್ತು ಇತರ ಸಂಘಗಳು ಸರಕಾರದ ಜೊತೆಗೆ ಕೈಜೋಡಿಸಿ ಪೊಲಿಯೋ ನಿರ್ಮೂಲನಾ ಆಂದೋಲನಾ ಮಾಡುವಾಗ ಜನರು ಕೂಡಾ ಅವರ ಜೊತೆ ಸೇರಿಕೊಂಡು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಆ ಮೂಲಕ ಒಂದು ಸುಂದರ ಸದೃಢ ಆರೋಗ್ಯಪೂರ್ಣ ದೇಶ ಕಟ್ಟುವಲ್ಲಿ ಸರಕಾರಕ್ಕೆ ಸಹಕಾರ ನೀಡಲೇಬೇಕು.

ಡಾ|| ಮುರಲೀ ಮೋಹನ ಚೂಂತಾರು

error: Content is protected !!