(ನ್ಯೂಸ್ ಕಡಬ) newskadaba.com ಅ.21 ಬೆಂಗಳೂರು: ಬಿಪಿಎಲ್ ಹಾಗೂ ಅಂತ್ಯೋದಯ ಅನ್ನದ ಪಡಿತರ ಕಾರ್ಡುದಾರರಿಗೆ ನೇರ ನಗದು ಪಾವತಿ ಬದಲು ಆಹಾರ ಕಿಟ್ ಪೂರೈಸಲು ಸರಕಾರ ಗಂಭೀರ ಚಿಂತನೆ ನಡೆಸಿದ್ದು, ಅ. 28ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಅನ್ನ ಸುವಿಧಾ’ ಯೋಜನೆಯಡಿ 80 ವರ್ಷ ಮೇಲ್ಪಟ್ಟವರಿಗೆ ಮನೆಗೇ ಅಕ್ಕಿ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು. ಇದಲ್ಲದೆ, ಕೇಂದ್ರ ಸರಕಾರವು ಕರ್ನಾಟಕಕ್ಕೆ ಭಾರತೀಯ ಆಹಾರ ನಿಗಮದ ಮೂಲಕ ಪ್ರತಿ ಕೆ.ಜಿ. 28 ರೂ.ಗಳಂತೆ ಅಕ್ಕಿ ಕೊಡಲು ಒಪ್ಪಿದ್ದು, ಇದನ್ನು ಖರೀದಿಸಲು ರಾಜ್ಯ ಸರಕಾರವೂ ಪ್ರಕ್ರಿಯೆ ನಡೆಸುತ್ತಿದೆ. ಒಂದು ವೇಳೆ ಈ ಅಕ್ಕಿ ಕೇಂದ್ರದಿಂದ ಸಿಕ್ಕಿದರೂ ರಾಜ್ಯ ಆಹಾರ ಇಲಾಖೆಯಿಂದ ನೀಡಿರುವ 12 ಲಕ್ಷ ಕಾರ್ಡುದಾರರಿಗೆ ಇದನ್ನು ಪೂರೈಸಲಾಗುತ್ತದೆ ಎಂದು ಮಾಹಿತಿ ನೀಡಿದರು.ರಾಜ್ಯದಲ್ಲಿ ಎಲ್ಲ ಮಾದರಿಯ ಪಡಿತರ ಚೀಟಿಗಳು ಸೇರಿ ಒಟ್ಟು 1.51 ಕಾರ್ಡ್‌ಗಳಿದ್ದು, 5.22 ಕೋಟಿ ಫಲಾನುಭವಿಗಳಿದ್ದಾರೆ. ಇದರಲ್ಲಿ ಎಪಿಎಲ್ ಕುಟುಂಬಗಳೂ ಇವೆ. ಇದಲ್ಲದೆ, 2023ರಿಂದ ಈವರೆಗೆ ಸ್ವೀಕೃತವಾಗಿದ್ದ 4 ಲಕ್ಷಕ್ಕೂ ಅಧಿಕ ಅರ್ಜಿಗಳ ಪೈಕಿ 2.30 ಲಕ್ಷ ಅರ್ಜಿಗಳನ್ನು ಅರ್ಹ ಎಂದು ಪರಿಗಣಿಸಲಾಗಿದೆ. 75,437 ಅರ್ಜಿಗಳು ತಿರಸ್ಕೃತಗೊಂಡಿವೆ. 1.75 ಲಕ್ಷ ಕಾರ್ಡ್‌ಗಳನ್ನು ಕೊಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಡಿಬಿಟಿ ಬದಲು ಆಹಾರ ಕಿಟ್‌ಗೆ ಬೇಡಿಕೆ ಬಂದಿದ್ದು, ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಅನಂತರವಷ್ಟೇ ಆಹಾರ ಕಿಟ್ ಕೊಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.