(ನ್ಯೂಸ್ ಕಡಬ) newskadaba.com ಅ.19,ಮೈಸೂರು: ಮನೆ ಬಿಟ್ಟು ಬಂದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಣೆ ಮಾಡಿದ ಘಟನೆ ಅಕ್ಟೋಬರ್ 18 ರಂದು ಮಲ್ಪೆ ಬೀಚ್‌ನಲ್ಲಿ ನಡೆದಿದೆ.
ರಕ್ಷಿಸಲಾದ ಮಕ್ಕಳು ಹಾವೇರಿಯವರು ಎಂದು ತಿಳಿದುಬಂದಿದೆ. ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವ ಆಸೆಯನ್ನು ಹೊಂದಿದ್ದರೂ ಪೋಷಕರ ಬೆಂಬಲವಿಲ್ಲದೆ ಅಸಹಾಯಕರಾಗಿದ್ದೇವೆ. ಹೀಗಾಗಿ ತಮ್ಮ ವಿದ್ಯಾಭ್ಯಾಸಕ್ಕೆ ಹಣ ಸಂಗ್ರಹಿಸುವ ಉದ್ದೇಶದಿಂದ ಹಾವೇರಿಯಿಂದ ಉಡುಪಿಗೆ ಬಂದಿದ್ದೇವೆ ಎಂದು ಬಾಲಕಿಯರು ತಿಳಿಸಿದ್ದಾರೆ. ಬೀಚ್‌ನಲ್ಲಿ ಈ ಇಬ್ಬರು ಬಾಲಕಿಯರ ಚಲನವಲನಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಹೀಗಾಗಿ ಬೀಚ್ ಗಸ್ತು ಸಿಬ್ಬಂದಿ ಸುರೇಶ್ ಅಂಚನ್ ಬಾಲಕಿಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಬಾಲಕಿಯರು ಮನೆ ಬಿಟ್ಟು ಬಂದಿರುವುದು ಬೆಳಕಿಗೆ ಬಂದಿದೆ.ವಿಷಯ ತಿಳಿದ ಕೂಡಲೇ ಅಂಚನ್ ಅವರು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಒಳಕಾಡು ಅವರು ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ರಕ್ಷಣಾ ಘಟಕಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.