(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಅ. 19. ಭಾರತದ ಕಾಫಿಗೆ ಐತಿಹಾಸಿಕ ಧಾರಣೆ ಸಿಗುವ ಮೂಲಕ ದಾಖಲೆ ನಿರ್ಮಿಸಿದೆ. ಅರೆಬಿಕಾ ಕಾಫಿಗಿಂತ ಕಡಿಮೆ ಧಾರಣೆ ಹೊಂದಿರುತ್ತಿದ್ದ ರೊಬಸ್ಟಾ ಪಾರ್ಚ್ಮೆಂಟ್ ಈ ವರ್ಷ 20,000 ರೂ.ಗಳಿಗೆ ತಲುಪುವ ಮೂಲಕ ಭಾರತದ ಕಾಫಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ.
ಆದರೆ, ಇದರ ಲಾಭ ಕಾಫಿ ದಾಸ್ತಾನು ಇರಿಸಿಕೊಂಡಿದ್ದ ಕೆಲವೇ ಕೆಲವು ಬೆಳೆಗಾರರು ಮತ್ತು ವರ್ತಕರಿಗೆ ಮಾತ್ರ ಲಭ್ಯವಾಗಿದೆ. ಕಾಫಿ ಧಾರಣೆ ಹೆಚ್ಚಾಗುತ್ತಿದ್ದಂತೆ ಇತ್ತ ಕಾಫಿಪುಡಿ ಬೆಲೆಯೂ ಗಗನಕ್ಕೇರಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಬ್ರೆಜಿಲ್, ವಿಯೆಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದ ಇಳುವರಿ ಸಂಪೂರ್ಣ ಕುಂಠಿತವಾಗಿದೆ. ಭಾರತದಲ್ಲೂ ವಾರ್ಷಿಕ ಉತ್ಪಾದನೆಯ ಗುರಿ ತಲುಪಿಲ್ಲ. ಇದರಿಂದ ಲಂಡನ್ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚಾಗಿದ್ದು, ಧಾರಣೆ ಏರಿಕೆಗೆ ಕಾರಣವಾಗಿದೆ.