“ಟ್ರಮಡಾಲ್” ಎಂಬ ನೋವು ನಿವಾರಕ ಮಾತ್ರೆ- ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಅ. 17. ಟ್ರಮಡಾಲ್ ಎಂಬ ವಿವಾದಾತ್ಮಕ ನೋವು ನಿವಾರಕ ಔಷಧಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ, ಅತ್ಯಂತ ಹೆಚ್ಚು ದುರ್ಬಳಕೆಯಾಗುತ್ತಿರುವ ಮತ್ತು ಹತ್ತು ಹಲವು ವಿವಾದಕ್ಕೆ ಕಾರಣವಾದ ಮಾತ್ರೆ ಟ್ರಮಡಾಲ್ ಎಂದರೂ ತಪ್ಪಾಗಲಾರದು. ಇದೊಂದು ಪರಿಣಾಮಕಾರಿ ನೋವು ನಿವಾರಕ ಔಷಧಿಯಾಗಿದ್ದು, ತೀವ್ರವಾದ ಮಂಡಿ ನೋವು, ಸೊಂಟ ನೋವು, ಹಲ್ಲು ನೋವು ಮುಂತಾದ ನೋವುಗಳಿಗೆ ಬಳಸುವ ಔಷಧಿಯಾಗಿರುತ್ತದೆ. ಬಾಯಿ ಮುಖಾಂತರ ಸುಲಭವಾಗಿ ಸೇವಿಸಬಹುದಾದ ಈ ಔಷಧಿ ಸೇವಿಸಿದ ಒಂದು ಗಂಟೆಯ ಒಳಗೆ, ನೋವು ಶಮನ ಮಾಡುವ ಸಾಮರ್ಥ್ಯ ಹೊಂದಿದೆ. ಹೆಚ್ಚಾಗಿ ಪಾರಾಸಿಟಮಾಲ್ ಎಂಬ ನೋವು ನಿವಾರಕದ ಜೊತೆ ಲಭ್ಯವಿರುವ ಈ ಔಷಧಿ ಹೆಚ್ಚು ಅಲ್ಟ್ರಾಸೆಟ್, ಟ್ರಾಮ್- ಪಿ ಎಂಬ ಪದನಾಮದಿಂದ ಗುರುತಿಸಲ್ಪಟ್ಟಿದೆ ಮತ್ತು ಈ ರೀತಿ ಜೊತೆಯಾಗಿ ಬಳಸಿದಾಗ ಬಹಳ ಪರಿಣಾಮಕಾರಿಯಾಗಿ ನೋವು ನಿವಾರಣೆ ಮಾಡುತ್ತದೆ.

ಒಪಿಯಾಯ್ಡ್ ಎಂಬ ಗುಂಪಿಗೆ ಸೇರಿದ ಈ ನೋವು ನಿವಾರಕ ಔಷಧಿ ಹೆಚ್ಚು ಸೇವಿಸಿದಲ್ಲಿ ಜನರು ಇದಕ್ಕೆ ಜೋತು ಬೀಳುವ ಅಥವಾ ಆಡಿಕ್ಟ್ ಆಗುವ ಎಲ್ಲಾ ಸಾಧ್ಯತೆ ಇರುವುದರಿಂದ, ವೈದ್ಯರ ಚೀಟಿ ಇಲ್ಲದೇ ಈ ಔಷದಿಯನ್ನು ಮಾರುವಂತಿಲ್ಲ. ಆದರೆ ದೌರ್ಭಾಗ್ಯವೆಂದರೆ, ಈ ಔಷಧಿ ನಮ್ಮ ಫಾರ್ಮಸಿಗಳಲ್ಲಿ ವೈದ್ಯರ ಚೀಟಿ ಇಲ್ಲದೇ ಎಗ್ಗಿಲ್ಲದೆ ಸಿಗುತ್ತಿರುವುದು ಬಹಳ ನೋವಿನ ವಿಚಾರ. ಮೊನ್ನೆ ತಾನೇ ಗಲ್ಘ್ ರಾಷ್ಟ್ರಕ್ಕೆ ಹೋಗುತ್ತಿರುವವರೊಬ್ಬರ ಬಳಿ ಆತನ ಸ್ನೇಹಿತ 210 ಈ ಆಲ್ಟ್ರಾಸೆಟ್ ಔಷಧಿ ಪಾರ್ಸೆಲ್ ನೀಡಿದ ಪರಿಣಾಮವಾಗಿ ಸಭ್ಯ ವ್ಯಕ್ತಿಯೊಬ್ಬ ಜೈಲು ಪಾಲಾದದ್ದು ದುರಂತವೇ ಸರಿ. ಗಲ್ಫ್ ರಾಷ್ಟ್ರಗಳಲ್ಲಿ ಈ ಔಷಧಿಯನ್ನು ನಿಷೇದಿತ ಮಾದಕ ದ್ರವ್ಯದ ಪಟ್ಟಿಯಲ್ಲಿ ಸೇರಿಸಿರುವ ಕಾರಣದಿಂದ ವೈದ್ಯರ ಚೀಟಿ ಇಲ್ಲದೇ, ಅಗತ್ಯಕ್ಕಿಂತ ಜಾಸ್ತಿ ಈ ಔಷಧಿ ಸಾಗಾಟ ಮಾಡಿದರೆ ಜೈಲು ಪಾಲಾಗುವುದು ನಿಶ್ಚಿತ. ನಮ್ಮ ಭಾರತದಲ್ಲಿ 8 ರಿಂದ 10 ರೂಪಾಯಿಗೆ ಸಿಗುವ ಈ ಔಷಧಿಗೆ, ಅರಬ್ ರಾಷ್ಟ್ರಗಳಲ್ಲಿ 80 ರಿಂದ 100 ರೂಪಾಯಿ ಇದೆ. ಹಣ ಉಳಿಸುವ ಆಸೆಯಿಂದ ಜಾಸ್ತಿ ಔಷದಿ ತೆಗೆದುಕೊಂಡು ಹೋದಲ್ಲಿ ಕಂಬಿ ಎಣಿಸುವುದು ನಿಶ್ಚಿತ. ಅದೇ ರೀತಿ ವಿಚಾರ ತಿಳಿಯದೆ ಸಹಾಯ ಮಾಡಲು ಹೋಗಿ ಜೀವನವಿಡಿ ಜೈಲಲ್ಲಿ ಕೊಳೆಯುವ ಅನಿವಾರ್ಯತೆ ಬರಬಹುದು.

ಏನಿದು ಟ್ರಮ್‍ ಡಾಲ್?

1977ರಲ್ಲಿ ಜರ್ಮನಿಯ ಗ್ರುನೆಂಥಾಲ್ ಎಂಬ ಔಷಧಿ ಕಂಪೆನಿ, ಟ್ರಮಾಲ್ ಎಂಬ ಹೆಸರಿನಿಂದ ಈ ಔಷಧಿಯನ್ನು ಮಾರುಕಟ್ಟೆಗೆ ತಂದಿತು. 20 ವರ್ಷಗಳ ಬಳಿಕ ಅಮೇರಿಕ ಇಂಗ್ಲೇಂಡ್ ಮತ್ತು ಆಸ್ಟ್ರೇಲಿಯಾಗಳಲ್ಲಿಯೂ ಬಳಕೆಗೆ ಬಂತು. ಇದೀಗ ವಿಶ್ವದೆಲ್ಲೆಡೆ ಈ ಔಷಧಿ ಲಭ್ಯವಿದೆ. ಈ ಟ್ರಮ್‍ಡಾಲ್ ಔಷಧಿ ಮಾತ್ರೆ, ಇಂಜೆಕ್ಷನ್, ಸಿರಪ್, ಡ್ರಾಪ್ಸ್, ನೀರಲ್ಲಿ ಕರಗುವ ಮಾತ್ರೆ, ನೀರಿನಲ್ಲಿ ಕರಗಬಹುದಾದ ಫೌಡರ್ ಹೀಗೆ ಹತ್ತು ಹಲವು ರೂಪಗಳಲ್ಲಿ ಲಭ್ಯವಿದೆ. ಸಾಧಾರಣ ಮತ್ತು ಅತೀ ಸಾಧಾರಣ ನೋವಿಗೆ ಈ ಔಷಧಿ ಮಾರ್ಪಿನ್ ಎಂಬ ಔಷಧಿಯಷ್ಟೇ ಪರಿಣಾಮಕಾರಿ. ಆದರೆ ತೀವ್ರತರ ನೋವಿಗೆ ಈ ಔಷಧಿ ಮಾರ್ಪಿನ್ ಔಷಧಿಯಷ್ಟು ಪರಿಣಾಮಕಾರಿಯಲ್ಲ. ಔಷಧಿ ಸೇವಿಸಿದ ಒಂದು ಗಂಟೆಯ ಬಳಿಕ ನೋವು ನಿವಾರಕ ಶಕ್ತಿ ಆರಂಭವಾಗಿ 4ರಿಂದ 5 ಗಂಟೆಗೆ ತನ್ನ ಪರಿಪೂರ್ಣತೆಗೆ ತಲುಪುತ್ತದೆ. ಸಾಮಾನ್ಯವಾಗಿ 6 ಗಂಟೆಗಳ ಕಾಲ ಈ ಔಷಧಿಯ ಪರಿಣಾಮ ಇರುತ್ತದೆ.

 

ಅಡ್ಡ ಪರಿಣಾಮ ಏನು?

ತಲೆ ತಿರುಗಿದಂತಾಗುವುದು, ಒಣಬಾಯಿ, ತಲೆನೋವು, ಅಜೀರ್ಣ, ಮಲಬದ್ಧತೆ, ತುರಿಕೆ, ವಾಂತಿ, ವಾಕರಿಕೆ, ಮುಂತಾದ ಅಡ್ಡ ಪರಿಣಾಮ ಅತೀ ಸಾಮಾನ್ಯವಾಗಿ ಇರುತ್ತದೆ. ಕೆಲವರಿಗೆ ಅಪಸ್ಮಾರ ಉಂಟಾಗುವ ಸಾಧ್ಯತೆಯೂ ಇದೆ. ಮಾತ್ರೆಗೆ ಅವಲಂಬಿತವಾಗುವುದು ಅಥವಾ ಅಡಿಕ್ಷನ್ ಈ ಔಷಧಿಯ ಬಹುದೊಡ್ಡ ಅಡ್ಡ ಪರಿಣಾಮ. ಈ ಕಾರಣದಿಂದಲೇ ಈ ಔಷಧಿಯನ್ನು ಬಹಳ ಜಾಗರೂಕತೆಯಿಂದ ಬಳಸಬೇಕು. ಈ ಔಷಧಿ ಲಿವರ್ ನಲ್ಲಿ ಜೀರ್ಣವಾಗುವುದರಿಂದ ಲಿವರ್ ನ ತೊಂದರೆ ಇರುವವರಿಗೆ ಈ ಔಷಧಿಯನ್ನು ಕೊಡುವಾಗ ಜಾಗ್ರತೆ ವಹಿಸಬೇಕು. ಅದೇ ರೀತಿ ಕಿಡ್ನಿ ತೊಂದರೆ ಇರುವವರಲ್ಲಿಯೂ ಬಹಳ ಹುಷಾರಾಗಿರಬೇಕು. ಆತ್ಮಹತ್ಯೆಯ ಸಾಧ್ಯತೆ ಇರುವ ವ್ಯಕ್ತಿಗಳಿಗೆ ಈ ಔಷಧಿ ನೀಡಲೇಬಾರದು. ಮಗುವಿಗೆ ಎದೆ ಹಾಲುಣಿಸುವ ತಾಯಂದಿರಲ್ಲಿ ಮತ್ತು ಗರ್ಭಿಣಿ ಸ್ತ್ರೀಯರಲ್ಲಿಯೂ ಈ ಔಷಧಿ ಸಾಧ್ಯವಾದಷ್ಟು ಬಳಸಬಾರದು. ಸೆರಟೋನಿನ್ ಸಿಂಡ್ರೋಮ್ ಎಂಬ ರೋಗಕ್ಕೂ ಕಾರಣವಾಗುತ್ತದೆ ಮತ್ತು ಔಷಧಿ ಸೇವಿಸಿದವರು ಸ್ವಲ್ಪ ಮತ್ತೇರಿದವರಂತೆ ವರ್ತಿಸುವ ಸಾಧ್ಯತೆಯೂ ಇರುತ್ತದೆ.

ಎಲ್ಲಿ ಈ ಔಷಧಿ ಬಳಸಬಾರದು?

  1. 12 ವರ್ಷದ ಕೆಳಗಿನ ಮಕ್ಕಳಲ್ಲಿ ಈ ಔಷಧಿ ಬಳಸಬಾರದು.
  2. ಕಿಡ್ನಿ ಮತ್ತು ಲಿವರ್‍ ತೊಂದರೆ ಇರುವವರಲ್ಲಿ ಈ ಔಷಧಿಯನ್ನು ಜಾಗರೂಕತೆಯಿಂದ ಬಳಸತಕ್ಕದ್ದು.
  3. ಎದೆ ಹಾಲುಣಿಸುವ ಮತ್ತು ಗರ್ಭಿಣಿಯರು ಸಾಧ್ಯವಾದಷ್ಟು ಬಳಸದಿರುವುದು ಉತ್ತಮ.
  4. ಉಸಿರಾಟದ ಸಮಸ್ಯೆ ಇರುವ ಹಿರಿಯರಲ್ಲಿ ಈ ಔಷಧಿ ಉಸಿರಾಟದ ಪ್ರಕ್ರಿಯೆಗೆ ಮತ್ತಷ್ಟು ಕೆಡಕುಂಟು ಮಾಡಬಹುದು.
  5. ಮಾನಸಿಕ ತೊಂದರೆ ಸಮಸ್ಯೆ ಮತ್ತು ಆತ್ಮಹತ್ಯಾ ಸಾಧ್ಯತೆ ಇರುವ ವ್ಯಕ್ತಿಗಳಲ್ಲಿ ಈ ಔಷಧಿ ಬಳಸಲೇಬಾರದು.
  6. ಅಸ್ತಮಾ ತೊಂದರೆ ಇರುವವರಲ್ಲಿ ಈ ಔಷಧಿ ಬಳಸದಿರುವುದು ಉತ್ತಮ.
  7. ಸದಾ ಕಾಡುವ ಹೊಟ್ಟೆ ನೋವು, ಕರುಳಿನ ತೊಂದರೆ, ಮಲಬದ್ಧತೆ ಇರುವವರು ಈ ಔಷಧಿ ಬಳಸಬಾರದು.

ಕೊನೆ ಮಾತು

ಅತಿಯಾದರೆ ಅಮೃತವೂ ವಿಷ ಎಂಬ ಮಾತು ಎಲ್ಲರಿಗೂ ತಿಳಿದೇ ಇದೆ. ಔಷಧಿಯನ್ನು ಔಷಧಿಯಂತೆಯೇ ಸೇವಿಸಬೇಕು. ಕೆಲವರು ಔಷಧಿಯನ್ನೇ ಆಹಾರದಂತೆ ಬಳಸುತ್ತಿರುವುದು ಬಹಳ ನೋವಿನ ಸಂಗತಿ. “ಮಂತ್ರಕ್ಕಿಂತ ಎಂಜಲು ಜಾಸ್ತಿ” ಎಂಬಂತೆ ಇತ್ತೀಚಿನ ದಿನಗಳಲ್ಲಿ ಆಹಾರಕ್ಕಿಂತ ಔಷಧಿಯ ಪ್ರಮಾಣವೇ ಜಾಸ್ತಿಯಾಗುತ್ತಿರುವುದು ಬಹಳ ದೌರ್ಭಾಗ್ಯದ ಸಂಗತಿ. ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ, ಕಲುಷಿತಗೊಂಡ ಗಾಳಿ, ನೀರು, ಆಹಾರ, ಹದಗೆಡುತ್ತಿರುವ ಪರಿಸರ ಮತ್ತು ಹಳಸಿ ಹೋಗುತ್ತಿರುವ ವೈದ್ಯ – ರೋಗಿಯ ಸಂಬಂಧದಿಂದಾಗಿ, ಇಂದಿನ ದಿನಗಳಲ್ಲಿ ಆರೋಗ್ಯವಂತ ವ್ಯಕ್ತಿಯನ್ನು ದುರ್ಬೀನು ಹಿಡಿದು ಹುಡುಕಿದರೂ ಸಿಗಲಾರದಂತಹ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ವೈದ್ಯರು ಮತ್ತು ರೋಗಿಗಳಲ್ಲಿ ಔಷಧಿ ನೀಡುವಾಗ ಮತ್ತು ಔಷಧಿ ಬಳಸುವಾಗ ವಿಶೇಷವಾದ ಸಾಮಾಜಿಕ ಹೊಣೆಗಾರಿಕೆ ಇದೆ. ಈ ಕಾರಣದಿಂದಲೇ ಈ ಔಷಧಿಯನ್ನು ವೈದ್ಯರು ನೀಡುವಾಗ ಮಾತ್ರ ಸೇವಿಸತಕ್ಕದ್ದು. ಚಾಕೋಲೆಟ್ ತಿಂದಂತೆ ನಾವು ತಿಂದು, ಇನ್ನೊಬ್ಬರಿಗೂ ಅದೇ ಔಷಧಿ ನೀಡಿ ಎಲ್ಲಾ ನೋವು ಕ್ಷಣಾರ್ಧದಲ್ಲಿ ಮಾಯಾವಾಗುತ್ತದೆ ಎಂದು ಆಶ್ವಾಸನೆ ನೀಡಿ, ಸ್ವಯಂ ವೈದ್ಯರಾಗುವುದನ್ನು ನಿಲ್ಲಿಸಲೇಬೇಕಾದ ಅನಿವಾರ್ಯತೆ ಇದೆ. ಹಾಗಾದಲ್ಲಿ ಮಾತ್ರ ಒಂದು ಸುಂದರ ಸದೃಡ ಸಮಾಜದ ನಿರ್ಮಾಣಕ್ಕೆ ಸಾಧ್ಯವಾಗಬಹುದು.

ಡಾ|| ಮುರಲೀ ಮೋಹನ್ ಚೂಂತಾರು

error: Content is protected !!

Join WhatsApp Group

WhatsApp Share