ಕಡಬ: ಬಂಟ್ರ ಶಾಲಾ ಶಿಕ್ಷಕ ರಾಮಕೃಷ್ಣ ಮಲ್ಲಾರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ, ಶಾಲೆಗೆ ಮಸಿ ಬಳಿಯುವ ಕೆಲಸ- ಶಾಲಾಭಿವೃದ್ದಿ ಸಮಿತಿ ಆರೋಪ

(ನ್ಯೂಸ್ ಕಡಬ) newskadaba.com ಅ.17. ಕಡಬ ತಾಲೂಕಿನ ಬಂಟ್ರ-ಮರ್ದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾಮಾಣಿಕ ಶಿಕ್ಷಕರೋರ್ವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಿಸಿ ಶಾಲೆಗೆ ಮಸಿಬಳಿಯುವ ಕೆಲಸವಾಗುತ್ತಿದೆ ಎಂದು ಶಾಲಾ ಎಸ್‌ಡಿಎಂಸಿ ಹಾಗೂ ಹಿರಿಯ ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್ ಕೇನ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಮ್ಮ ಶಾಲಾ ಹೆಮ್ಮೆಯ ಶಿಕ್ಷಕ ರಾಮಕೃಷ್ಣ ಮಲ್ಲಾರ ಅವರ ವಿರುದ್ದ ಮೊಹಿದ್ದೀನ್ ಕುಟ್ಟಿ ಹಾಗೂ ಸಾಜಸ್ ಎಂಬವರು ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಸತ್ಯಕ್ಕೆ ದೂರವಾದ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವುದು ಖಂಡನೀಯ. ಊರಿಗೆ ಹಾಗೂ ಶಾಲೆಗೆ ಸಂಬಂಧಪಡದ ಕೆಲವು ವ್ಯಕ್ತಿಗಳು ಶಿಕ್ಷಕರ ತೇಜೋವಧೆ ಮಾಡಿರುವುದಲ್ಲದೇ ಶತಮಾನ ದಾಟಿದ ಶಾಲೆಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಶಾಲಾ ಶಿಕ್ಷಕರು ತಮ್ಮ ಕರ್ತವ್ಯದ ಅವಧಿಯಲ್ಲಿ ಶೈಕ್ಷಣಿಕ ಹಾಗೂ ಶಾಲಾ ಚಟುವಟಿಕೆಗಳಿಗೆ ಹೊರಗೆ ಹೋಗುವ ಸಂದರ್ಭಗಳಲ್ಲಿ ಮುಖ್ಯ ಶಿಕ್ಷಕರ ಅನುಮತಿಯನ್ನು ಪಡೆದು ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಸೇವಾದಳ ಹಾಗೂ ಆರೋಗ್ಯ ಇಲಾಖೆಯ ತರಬೇತಿಗಳಿಗೆ ಮೇಲಾಧಿಕಾರಿಗಳ ಕಚೇರಿಗಳಿಗೆ ಇನ್ನಿತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು, ಚಲನ ವಲನ ಪುಸ್ತಕದಲ್ಲಿ ದಾಖಲಿಸಿ ಹೊರಹೋಗುತ್ತಾರೆ. ಈ ದಾಖಲೆಯನ್ನು ಪಡೆದುಕೊಂಡು, ಶಾಲಾ ಅವಧಿಯಲ್ಲಿ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಎಂದು ಆರೋಪ ಮಾಡಿರುವುದು ಸರಿಯಲ್ಲ. ಇಂತಹ ಅಪಪ್ರಚಾರಗಳು ಮುಂದುವರಿದರೆ ನಾವು ಸುಮ್ಮನಿರುವುದಿಲ್ಲ ಎಂದು ಸಂತೋಷ್ ಎಚ್ಚರಿಸಿದರು.

Also Read  ಮೈಸೂರು : ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ

ಮರ್ದಾಳದ ಉದ್ಯಮಿಗಳಾದ ಶಿವಪ್ರಸಾದ್ ಕೈಕುರೆ ಹಾಗೂ ಬಾಲಕೃಷ್ಣ ಗೌಡ ಮಾತನಾಡಿ ಇವತ್ತು ಮರ್ದಾಳ ಶಾಲೆ ಉಳಿದಿದ್ದರೆ ಅದು ಶಿಕ್ಷಕ ರಾಮಕೃಷ್ಣ ಮಲ್ಲಾರ ಅವರಿಂದ, ಶಾಲೆಯ ಅಭಿವೃದ್ಧಿಯಲ್ಲಿ ಅವರದ್ದು ದೊಡ್ಡ ಪಾತ್ರವಿದೆ. ಅವರು ಯಾವುದೇ ಸಂಘಟನೆಗಳಲ್ಲಿದ್ದರೂ ಶಾಲಾ ಸಮಯದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ವಿವಿಧ ಸಂಘಟನೆಗಳಲ್ಲಿ ಅವರು ಸಕ್ರಿಯರಾಗಿದ್ದುಕೊಂಡು ಶಾಲೆಗೆ ಪೂರಕವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಪ್ರತಿನಿಧಿಸುವ ಸುಬ್ರಹ್ಮಣ್ಯ ರೋಟರಿ ಸಂಸ್ಥೆ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದಾರೆ. ಅವರು ಸುಬ್ರಹ್ಮಣ್ಯ ರೋಟರಿ ಸಂಸ್ಥೆಯಿಂದ ಶಾಲೆಗೆ ಶುದ್ಧ ನೀರಿನ ಘಟಕ, ಮೈಕ್ ವ್ಯವಸ್ಥೆ, ಸ್ಟಾರ್ಟ್ ಕ್ಲಾಸ್‌ ಗೆ ಬೇಕಾದ ಪರಿಕರ, ಕಂಪ್ಯೂಟರ್, ಟಿವಿ, ಚೇರ್ ಕೊಡಿಸಿದ್ದಾರೆ. ಶಾಲಾ ಕಟ್ಟಡ ಬೀಳುವ ಸಂದರ್ಭದಲ್ಲಿ ಕೊಠಡಿ ದುರಸ್ತಿಗೆ ತಾಲೂಕು ಪಂಚಾಯತ್ ಅನುದಾನವನ್ನು ಜೋಡಿಸಿಕೊಂಡು ಇಲಾಖೆಗಳ ಸಹಕಾರ ಪಡೆದು ಮರದ ಪಕ್ಕಾಸುಗಳನ್ನು ಜೋಡನೆ ಮಾಡಿ ಸ್ವತಃ ಮನೆಯಿಂದ ಹಂಚು ತಂದು ಛಾವಣಿಗೆ ಹೊದಿಸಿ ಶಾಲಾ ಕಟ್ಟಡವನ್ನು ಉಳಿಸಿಕೊಂಡಿದ್ದಾರೆ. ಅವರ ಸಹೋದರ ಅವರಿಂದ ಶಾಲೆಗೆ ಪ್ರಿಂಟರ್ ಕೊಡಿಸಿದ್ದಾರೆ. ಶಾಲೆಗೆ ಕೈಕುರೆ ರಾಮಣ್ಣ ಗೌಡರ ಸ್ಮರಣಾರ್ಥ ಶಾಲಾ ದ್ವಾರ ನಿರ್ಮಾಣ. ಶಾಲೆಯ ಎದುರು ಹಾದು ಹೋಗುವ ರಾಜ್ಯ ಹೆದ್ದಾರಿಗೆ ಬ್ಯಾರಿಕೇಡ್ ಅಳವಡಿಕೆ ಮಾಡಿಸಿದ್ದಾರೆ. ವಿದ್ಯಾರ್ಥಿಗಳ ಊಟದ ಬಟ್ಟಲು ಇಡುವ ಸ್ಟ್ಯಾಂಡ್ ಗಳನ್ನು ಸ್ವಂತ ಖರ್ಚಿನಲ್ಲಿ ಮಾಡಿಸಿಕೊಟ್ಟಿದ್ದಾರೆ. ಪ್ರತೀ ವರ್ಷ ಏಳನೇ ತರಗತಿಯ ಮಕ್ಕಳ ವಾರ್ಷಿಕ ಫೋಟೋ ತೆಗೆಯುವ ಖರ್ಚನ್ನು ಅವರೇ ಭರಿಸುತ್ತಾರೆ. ಹೀಗೆ ಹತ್ತು ಹಲವು ಗಮನಾರ್ಹ ಕೆಲಸಗಳನ್ನು ಮಾಡಿ ಅವರು ಶಾಲೆಯ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದಾರೆ. ಇವರ ಶ್ರಮದಿಂದ ಶಿಕ್ಷಣ ಗುಣಮಟ್ಟ ಹೆಚ್ಚಿದೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ಒಬ್ಬ ಶಿಕ್ಷಕನನ್ನು ವಿನಾಕಾರಣ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪೋಷಕರಾದ ಸುರೇಶ್ ಅಂತಿಬೆಟ್ಟು, ವಾಡ್ಯಪ್ಪ ಕೋಲಂತಾಡಿ, ಸತೀಶ್ ಆಜನ ಉಪಸ್ಥಿತರಿದ್ದರು.

error: Content is protected !!
Scroll to Top