(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.16. ಬಡವರಿಗಾಗಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ನ ಊಟ, ತಿಂಡಿಯ ಗುಣಮಟ್ಟ, ಪ್ರಮಾಣ ಮತ್ತು ಶುಚಿತ್ವದ ವಿಷಯದಲ್ಲಿ ರಾಜಿ ಬೇಡ. ಎಲೆಕ್ಟ್ರಿಕಲ್ ಸ್ಕೇಲ್‍ನ್ನು ಕೌಂಟರ್‍ನಲ್ಲಿ ಅಳವಡಿಸಿದ್ದು, ಆಹಾರದ ಪ್ರಮಾಣದಲ್ಲಿ ಗ್ರಾಹಕರಿಗೆ ಅನುಮಾನವಿದ್ದಲ್ಲಿ ಪರಿಹರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಸರಬಾರಾಜು ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಂದಿರಾ ಕ್ಯಾಂಟೀನ್‍ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಆಹಾರದ ರುಚಿಯಲ್ಲಿ ವ್ಯತ್ಯಾಸವಾಗಬಾರದು. ಸರಿಯಾದ ರೂಪದಲ್ಲಿ ಸರಿಯಾದ ಗುಣಮಟ್ಟದಲ್ಲಿ ಆಹಾರವನ್ನು ಒದಗಿಸಬೇಕು. ಇಂದಿರಾ ಕ್ಯಾಂಟೀನ್‍ನ ಫಲಾನುಭವಿಗಳಲ್ಲಿ ಹೆಚ್ಚಿನವರು ಕಾರ್ಮಿಕ ವರ್ಗದ ಜನರು. ಬೆಳಿಗ್ಗೆ ಉಪಹಾರ ಮಾಡಿದ ನಂತರ ಮಧ್ಯಾಹ್ನದ ವರೆಗೆ ಹೊಟ್ಟೆ ತುಂಬಿದಂತಿರಬೇಕು. ಗ್ರಾಹಕರ ಬೇಡಿಕೆಯ ಮೇರೆಗೆ ಚಿತ್ರಾನ್ನದ ಜೊತೆಗೆ ಚಟ್ನಿ ಅಥವಾ ರೈತಾ ಮಾಡುವಂತೆ ಹಾಗೂ ಪೊಂಗಲನ್ನು ಉಪಹಾರದ ಪಟ್ಟಿಯಿಂದ ಕೈ ಬಿಡುವಂತೆ ಸೂಚಿಸಿದರು. ಊಟದಲ್ಲಿ ಮೊಸರನ್ನದ ಬದಲು ಪಲ್ಯವನ್ನು ನೀಡುವಂತೆ ಸೂಚಿಸಿದರು. ಅಂಗವಿಕಲ ವ್ಯಕ್ತಿಗಳ ಅನುಕೂಲಕ್ಕಾಗಿ ಕೂಪನ್ ಮೀಸಲಿಡಿ. ಅಂಗವಿಕಲರಿಗೆ, ಮಹಿಳೆಯರಿಗೆ ಮತ್ತು ಹಿರಿಯ ನಾಗರೀಕರಿಗೆ ಪ್ರಥಮ ಆದ್ಯತೆ ಮೇಲೆ ಕೂಪನನ್ನು ಹಂಚುವಂತೆ ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡುವಂತೆ ತಿಳಿಸಿದರು.
ಕೂಪನ್‍ನಲ್ಲಿ ಉಪಹಾರದ ನಿಗದಿತ ಬೆಲೆ (ರೂ. 12) ಮತ್ತು ಗ್ರಾಹಕರು ನೀಡುವಂತಹ ಬೆಲೆ (ರೂ. 5) ಎರಡನ್ನು ನಮೂದಿಸ ತಕ್ಕದು. ಸರ್ಕಾರ ಭರಿಸುತ್ತಿರುವ ವೆಚ್ಚದ ಬಗ್ಗೆ ಗ್ರಾಹಕರಿಗೆ ಸ್ಪಷ್ಟತೆ ಇರಬೇಕು. ಇಂದಿರಾ ಕ್ಯಾಂಟೀನ್‍ನಲ್ಲಿ ಕೆಲಸ ಮಾಡುವುದೇ ಸಿಬ್ಬಂದಿಗಳು ಇಂದಿರಾ ಕ್ಯಾಂಟೀನ್‍ನ ಸಮವಸ್ತ್ರ ಮತ್ತು ಟೋಪಿಯನ್ನು ಹಾಕಿಕೊಂಡು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವಂತೆ ಸಚಿವರು ಸೂಚಿಸಿದರು. ಸಿಬ್ಬಂದಿಗಳಿಗೆ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ನಡೆಸಬೇಕು ಮತ್ತು ದೈಹಿಕ ಸುದೃಢತೆಯುಳ್ಳ ವ್ಯಕ್ತಿಯನ್ನು ಹುದ್ದೆಗೆ ನೇಮಿಸಿಕೊಳ್ಳಬೇಕು ಎಂದರು. ಉಳ್ಳಾಲ ನಗರಸಭೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‍ನ ನಿರ್ಮಾಣದ ಕೆಲಸವು ಮುಂದಿನ ವಾರ ಸಂಪೂರ್ಣಗೊಳ್ಳಲಿದೆ. ಇದು ಮಾರ್ಚ್ 21 ಕ್ಕೆ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಹೋಬಳಿ ಮಟ್ಟದಲ್ಲಿ ರಾಜ್ಯದಲ್ಲೇ ಪ್ರಥಮ ಇಂದಿರಾ ಕ್ಯಾಂಟೀನ್ ಆಗಿರುತ್ತದೆ ಎಂದು ಯು.ಟಿ. ಖಾದರ್ ಹೇಳಿದರು.
ದ.ಕ. ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಮಾತನಾಡಿ, ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೀರಿನ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ಕೂಡಲೇ ಮಹಾನಗರ ಪಾಲಿಕೆಗೆ ತಿಳಿಸಬೇಕು. ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯವಾದಲ್ಲಿ ಕೂಡಲೇ ಇಲಾಖೆಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ಪೂರ್ಣಗೊಳಿಸಬೇಕು, ಜೂನ್ ತಿಂಗಳಿನಲ್ಲಿ ಮಳೆ ಜಾಸ್ತಿ ಇರುವುದರಿಂದ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ಉಪಹಾರ ಮತ್ತು ಊಟದಲ್ಲಿ ತರುವಂತಹ ಅಂತಿಮ ಬದಲಾವಣೆಯನ್ನು ತಮ್ಮ ಗಮನಕ್ಕೆ ತರುವಂತೆ ಸೂಚಿಸಿದರು. ಸಭೆಯಲ್ಲಿ ಸಾಯಿ ಹಾಸ್ಪಿಟಲಿಟಿ ಸರ್ವಿಸ್‍ನ ಮ್ಯಾನೇಜರ್ ಚಂದ್ರಹಾಸ್, ಕೆಫ್ ಇನ್‍ಫ್ರಾ, ಕಂಟ್ರಾಕ್ಟರ್ ರೋನಾಲ್ಡ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.