Online shopping; ಬಟ್ಟೆ ರಿಟರ್ನ್ ತೆಗೆದುಕೊಳ್ಳದೇ ಆಟವಾಡಿಸುತ್ತಿದ್ದ ಕಂಪನಿಗೆ ಬಿಗ್ ಶಾಕ್..!

(ನ್ಯೂಸ್ ಕಡಬ) newskadaba.com ಅ. 16. ಆನ್​ಲೈನ್​ನಲ್ಲಿ ಖರೀದಿಸಿದ ಬಟ್ಟೆಯನ್ನು ವಾಪಸ್ ತೆಗೆದುಕೊಳ್ಳದ ಕಂಪನಿಯೊಂದಕ್ಕೆ ಎರ್ನಾಕುಲಂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯವು ದಂಡ ವಿಧಿಸಿರುವ ಕುರಿತು ವರದಿಯಾಗಿದೆ. ಪ್ರಾಡಕ್ಟ್​ ಬೆಲೆ, ಪರಿಹಾರ ಮತ್ತು ನ್ಯಾಯಾಲಯದ ವೆಚ್ಚ ಸೇರಿದಂತೆ ಒಟ್ಟು 9,395 ರೂ.ಗಳನ್ನು ಪಾವತಿಸಲು ಕೋರ್ಟ್ ಆದೇಶಿಸಿರುವುದಾಗಿ ತಿಳಿದುಬಂದಿದೆ.

 

ಕೇರಳದ ಆಲಪ್ಪುಝದಲ್ಲಿರುವ ಇಹಾ ಡಿಸೈನ್ಸ್ ಬ್ರೈಡಲ್ ಸ್ಟುಡಿಯೋ ಎಂಬ ಆನ್ ಲೈನ್ ಶಾಪಿಂಗ್ ಸೆಂಟರ್ ವಿರುದ್ಧ ಎಡಪ್ಪಲ್ಲಿ ಮೂಲದ ಕೆ.ಜಿ. ಲಿಸಾ ಎಂಬವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ವರದಿಯ ಪ್ರಕಾರ, ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ದೂರುದಾರೆ ಲಿಸಾ ಎಂಬವರು 1,395 ರೂ.ಗಳನ್ನು ಪಾವತಿಸಿ ಚೂಡಿದಾರ್‌ ಅನ್ನು ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ ತಕ್ಷಣ ಪ್ರಾಡಕ್ಟ್​ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಲು ಮನವಿ ಮಾಡಲಾಯಿತು. ಆದರೆ, ಬಣ್ಣ ಬದಲಾವಣೆ ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿದೆ. ಹೀಗಾಗಿ ಲಿಸಾ ಅವರು ತನ್ನ ಆರ್ಡರ್​ ಅನ್ನು ರದ್ದುಗೊಳಿಸಲು ಪ್ರಯತ್ನಿಸಿದರಾದರೂ ಕಂಪನಿ ಅದನ್ನು ಕೂಡಾ ನಿರಾಕರಿಸಿತು.

Also Read  ಭಾರತಕ್ಕೆ ನೂತನ ರಾಯಭಾರಿಯಾಗಿ ʻಎರಿಕ್ ಗಾರ್ಸೆಟ್ಟಿʼ ಆಯ್ಕೆ

 

ಹೀಗಾಗಿ ಪಾವತಿಸಿದ ಮೊತ್ತವನ್ನು ಬೇರೆ ಆರ್ಡರ್​ಗೆ ಜಮಾ ಮಾಡಿಕೊಳ್ಳಲು ಮನವಿ ಮಾಡಲಾಯಿತು. ಆದರೆ, ಅದನ್ನೂ ತಿರಸ್ಕರಿಸಿದ ಕಂಪನಿ ಈಗಾಗಲೇ ನಿಮ್ಮ ಪ್ರಾಡಕ್ಟ್​ ಅನ್ನು ಅಂಚೆ ಮೂಲಕ ಕಳುಹಿಸಲಾಗಿದೆ ಎಂದು ತಿಳಿಸಿತ್ತು. ಬಳಿಕ ಆರ್ಡರ್​ ಡೆಲಿವರಿ ಪಡೆದು ಬಾಕ್ಸ್​ ಓಪನ್​ ಮಾಡಿ ಚೂಡಿದಾರ್ ನೋಡಿದಾಗ ಅದು ಉತ್ತಮ ಗುಣಮಟ್ಟದಾಗಿರಲಿಲ್ಲ. ಹೀಗಾಗಿ ಲಿಸಾ ಅವರು ಪ್ರಾಡಕ್ಟ್​ ಹಿಂದಿರುಗಿಸಲು ಪ್ರಯತ್ನಿಸಿದರು. ಆದರೆ, ಅದನ್ನು ಕಂಪನಿ ಒಪ್ಪಿರಲಿಲ್ಲ.

ಇದಾದ ಬಳಿಕ ಲಿಸಾ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಿದರು. ಮಾರಾಟ ಮಾಡಿದ ಪ್ರಾಡಕ್ಟ್​ ಅನ್ನು ವಿನಿಮಯ ಮಾಡಿಕೊಳ್ಳದಿರುವ ಅಥವಾ ಹಿಂತೆಗೆದುಕೊಳ್ಳದಿರುವ ಧೋರಣೆಯು ಅನೈತಿಕ ವ್ಯಾಪಾರ ಪದ್ಧತಿಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೇ, ಕಂಪನಿಗೆ ದಂಡ ವಿಧಿಸಿದ ಕೋರ್ಟ್, 45 ದಿನಗಳೊಳಗೆ ದೂರುದಾರರಿಗೆ ಮೊತ್ತವನ್ನು ಪಾವತಿಸುವಂತೆಯೂ ಆದೇಶಿಸಿದೆ. ಗ್ರಾಹಕರ ಹಣದೊಂದಿಗೆ ಆಟವಾಡುವ ಕಂಪನಿಗಳಿಗೆ ಇದೊಂದು ಎಚ್ಚರಿಕೆಯ ಪಾಠವಾಗಿದೆ.

error: Content is protected !!
Scroll to Top