(ನ್ಯೂಸ್ ಕಡಬ) newskadaba.com ಅ. 16. ಬೆಂಗಳೂರು: ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಇಂದೂ ಕೂಡ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ನಿನ್ನೆ ಧಾರಕಾರವಾಗಿ ಸುರಿದ ಮಳೆ ನಿನ್ನೆ ಸಂಜೆಯಿಂದ ತುಸು ಕಡಿಮೆಯಾಗಿತ್ತಾದರೂ ಸಂಪೂರ್ಣವಾಗಿ ನಿಂತಿರಲಿಲ್ಲ. ಇಂದು ಬೆಳಿಗ್ಗೆ ಯಥಾರೀತಿ ಜಿಟಿಜಿಟಿ ಮಳೆ ಆರಂಭವಾಯಿತು. ನಿನ್ನೆಗೆ ಹೋಲಿಸಿದರೆ ಇಂದು ಮಳೆಯ ಪ್ರಮಾಣ ರಾಜ್ಯದ ಒಳನಾಡಿನಲ್ಲಿ ಕಡಿಮೆಯಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇದೇ ರೀತಿ ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇಂದು ಮತ್ತು ನಾಳೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.