ಜನ ಸಂಚಾರದಿಂದ 50 ಮೀಟರ್ ದೂರದಲ್ಲಿ ಪಟಾಕಿ ಮಳಿಗೆ – ಕಡಬದ 5 ಕಡೆ ಪಟಾಕಿ ಸ್ಟಾಲ್ ಗೆ ಅವಕಾಶ…!

(ನ್ಯೂಸ್ ಕಡಬ) newskadaba.com ಅ.16. ಇದೇ ತಿಂಗಳ ಅಂದರೆ ಅಕ್ಟೋಬರ್ 31ರಿಂದ ನವೆಂಬರ್ 2ರ ತನಕ ನಡೆಯುವ ದೀಪಾವಳಿ ಹಬ್ಬದ ಸಮಯದಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡ ಮತ್ತು ಇತರ ಅನಾಹುತಗಳನ್ನು ತಡೆಗಟ್ಟಲು ಹಾಗೂ ನಿಭಾಯಿಸಲು ರಾಜ್ಯ ಅಗ್ನಶಾಮಕ ದಳ ಸುತ್ತೋಲೆ ಹೊರಡಿಸಿದ್ದು ಪುತ್ತೂರು ಮತ್ತು ಕಡಬದಲ್ಲಿ ಜನ ಸಂಚಾರ ಪ್ರದೇಶದಿಂದ 50 ಮೀಟರ್ ಅಂತರದಲ್ಲಿ ಪಟಾಕಿ ಸ್ಟಾಲ್ ಇರಿಸಲು ಸೂಚನೆ ನೀಡಿದ್ದು, ಪುತ್ತೂರು ಮತ್ತು ಕಡಬದಲ್ಲಿ 5 ಕಡೆ 69 ಪಟಾಕಿ ಮಳಿಗೆಗಳಿಗೆ ಅವಕಾಶವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.


ಈಗಾಗಲೇ ಪಟಾಕಿ ಸ್ಟಾಲ್ ಗೆ ಅನುಮತಿ ಕೋರಿ ಹಲವು ಅರ್ಜಿಗಳು ಅಗ್ನಿಶಾಮಕ ಇಲಾಖೆಗೆ ಬಂದ ಹಿನ್ನೆಲೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಪುತ್ತೂರು ಮತ್ತು ಕಡಬ ತಹಶೀಲ್ದಾರ್ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸೂಕ್ತ ಮತ್ತು ಸೂಕ್ತವಲ್ಲದ ಮೈದಾನಗಳ ವಿವರಣೆ ನೀಡಿದ್ದಾರೆ. ಪುತ್ತೂರಿನ ಕಿಲ್ಲೆ ಮೈದಾನದಲ್ಲಿ 4 ಪಟಾಕಿ ಮಳಿಗೆ, ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ 20ರಿಂದ 25 ಪಟಾಕಿ ಮಳಿಗೆ, ಕಡಬ ತಾಲೂಕಿನ ಆಲಂಕಾರು ದುರ್ಗಾಂಬಿಕಾ ಪದವಿ ಪೂರ್ವ ಕಾಲೇಜಿನ ಎದುರಿನ ಮೈದಾನದಲ್ಲಿ 5ರಿಂದ 10 ಪಟಾಕಿ ಮಳಿಗೆ, ರಾಮಕುಂಜದಲ್ಲಿ 10ರಿಂದ 15 ಮಳಿಗೆ, ಕಡಬ ಪೆಟ್ರೋಲ್ ಪಂಪ್ ಎದುರಿನ ತೆರೆದ ಮೈದಾನದಲ್ಲಿ 10ರಿಂದ 15 ಪಟಾಕಿ ಮಳಿಗೆ ನಿರ್ಮಾಣಕ್ಕೆ ಅವಕಾಶವಿದೆ. ಕಡಬ ಪೇಟೆಯ ಸಂತೆಕಟ್ಟೆ, ಕಾಲೇಜು ಕ್ರಾಸ್ ರಸ್ತೆಯಲ್ಲಿ ಮತ್ತು ಕಡಬ ಹಳೆ ಸ್ಟೇಷನ್ ಬಳಿ ಪಟಾಕಿ ಮಳಿಗೆಗೆ ಸ್ಥಳ ಸೂಕ್ತವಾಗಿಲ್ಲ ಎಂದು ಅಧಿಕಾರಿಗಳು ಪರಿಶೀಲನೆ ಮಾಡಿ ವರದಿ ಸಲ್ಲಿಸಿದ್ದಾರೆ.

Also Read  ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ► ಸೆಪ್ಟೆಂಬರ್ 08 ರಂದು ದಕ್ಷಿಣ ಕನ್ನಡದಲ್ಲಿ ಶಾಲಾ - ಕಾಲೇಜುಗಳಿಗೆ ರಜೆ


ಈ ಬಾರಿ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಯಾವುದೇ ಅಂಗಡಿಗಳಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ. ಖಾಯಂ ಅಂಗಡಿಗಳಲ್ಲಿಯೂ ಪಟಾಕಿ ಮಾರಾಟ ಮಾಡಲು ಅಗ್ನಿಶಾಮಕ ಇಲಾಖೆಯಿಂದ ಅನುಮತಿ ನೀಡಿಲ್ಲ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

error: Content is protected !!
Scroll to Top