(ನ್ಯೂಸ್ ಕಡಬ) newskadaba.com ಅ.16. ಮೂರು ವಿಮಾನಗಳನ್ನು ಗುರಿಯಾಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬಾಂಬ್ ಬೆದರಿಕೆ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ, ಆತನ ತಂದೆ ಮತ್ತು ಇನ್ನೋರ್ವ ವ್ಯಕ್ತಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಕಳೆದ ಅ.14 ರಂದು ಮುಂಬೈನಿಂದ ನ್ಯೂಯಾರ್ಕ್ ಗೆ ಹೊರಟಿದ್ದ ಮೂರು ಅಂತಾರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದ್ದ ಹಿನ್ನೆಲೆ ಏರ್ ಇಂಡಿಯಾ ವಿಮಾನವನ್ನು ನವದೆಹಲಿಯಲ್ಲಿ ಇಳಿಸಿ ತಪಾಸಣೆ ನಡೆಸಲಾಗಿತ್ತು. ಆದರೆ, ವಿಮಾನದಲ್ಲಿ ಯಾವುದೇ ಅನುಮಾನಾಸ್ಪದವಾದ ವಸ್ತು ಕಂಡುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ಬೆದರಿಕೆಯು ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಎಕ್ಸ್ ನಲ್ಲಿ ಪೋಸ್ಟ್ ಮೂಲಕ ಬಂದಿದ್ದು, ಇದನ್ನು ಪರಿಶೀಲಿಸಲಾಗುತ್ತಿದೆ ಎಂದು ರಾಜನಂದಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗಾರ್ಗ್ ಹೇಳಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಭಾಗವಾಗಿ ಮುಂಬೈ ಪೊಲೀಸರ ತಂಡ ರಾಜನಂದಗಾಂವ್ ಪೊಲೀಸರ ಸಹಾಯದಿಂದ ನಗರದ ನಿವಾಸಿ 17 ವರ್ಷದ ಹುಡುಗ, ಅವನ ತಂದೆಯ ಎಕ್ಸ್ ಖಾತೆಯನ್ನು ಬಳಸಿದ ವ್ಯಕ್ತಿಗೆ ನೋಟಿಸ್ ನೀಡಿ ಅವರನ್ನು ವಿಚಾರಣೆಗಾಗಿ ಮತ್ತು ಮುಂದಿನ ಕ್ರಮಕ್ಕಾಗಿ ಮುಂಬೈಗೆ ಕರೆಸಲಾಗಿದೆ ಎಂದು ಅಧಿಕಾರಿ ಹೇಳಿದರು.