(ನ್ಯೂಸ್ ಕಡಬ) newskadaba.com ಅ. 15. ಇನ್ನೇನು ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಲು ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಮಾಸ್ಟರ್ ಪ್ಲಾನ್ ಪ್ರಯೋಗಿಸಿದ್ದು, ಇನ್ಮುಂದೆ ಈ ಮಹಾನಗರವನ್ನು ಪ್ರವೇಶಿಸುವ ಲಘು ವಾಹನಗಳಿಗೆ ಟೋಲ್ ಇರೋದಿಲ್ಲ. ಈ ಕುರಿತು ಅಲ್ಲಿನ ಸರ್ಕಾರವೇ ಹೊಸ ನಿರ್ಧಾರವನ್ನು ಕೈಗೊಂಡಿರುವುದಾಗಿ ವರದಿಯಾಗಿದೆ. ಈ ಮೂಲಕ ಸೋಮವಾರ (ಅ.14) ಮಧ್ಯರಾತ್ರಿಯಿಂದ ಲಘು ಮೋಟಾರು ವಾಹನಗಳ ಮೂಲಕ ಮುಂಬೈಗೆ ಉಚಿತ ಟೋಲ್ ಪ್ರವೇಶವನ್ನು ಪಡೆಯಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದೆ.
ವರದಿಗಳ ಪ್ರಕಾರ, ಮುಂಬೈ ಟೋಲ್ ನಾಕಾಗಳ ಪೈಕಿ 5 ಟೋಲ್ ಗಳಲ್ಲಿ ಖಾಸಗಿ ಲಘು ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುತ್ತೇವೆ. ಸೋಮವಾರ ರಾತ್ರಿಯಿಂದಲೇ ಈ ನಿಯಮ ಜಾರಿಯಾಗಲಿದ್ದು, ಐದು ಟೋಲ್ ಗಳ ಮೂಲಕ ಲಘು ವಾಹನಗಳು ಟೋಲ್ ಮುಕ್ತವಾಗಿ ಪ್ರವೇಶಿಸಬಹುದು. ಲಘು ವಾಹನಗಳ ವರ್ಗದಲ್ಲಿ ಕಾರುಗಳು (ಹ್ಯಾಚ್ ಬ್ಯಾಕ್ ಗಳು, ಸೆಡಾನ್ ಗಳು ಮತ್ತು ಎಸ್ ಯುವಿಗಳು), ಜೀಪ್‌ಗಳು, ವ್ಯಾನ್‌ಗಳು, ಆಟೋ-ರಿಕ್ಷಾಗಳು, ಟ್ಯಾಕ್ಸಿಗಳು, ಡೆಲಿವರಿ ವ್ಯಾನ್‌ಗಳು ಮತ್ತು ಸಣ್ಣ ಟ್ರಕ್‌ಗಳು ಸೇರಿವೆ. ಪ್ರತಿನಿತ್ಯ ಆರು ಲಕ್ಷಕ್ಕೂ ಹೆಚ್ಚು ವಾಹನಗಳು ಮುಂಬೈ ದಾಟುತ್ತಿದ್ದು, ಅದರಲ್ಲಿ ಶೇ.80ರಷ್ಟು ಲಘು ಮೋಟಾರು ವಾಹನಗಳಾಗಿವೆ ಎಂದು ಸರ್ಕಾರ ಹೇಳಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯ ಈ ನಿರ್ಧಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.