ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯ ಜಾಗೃತಿ ಮೂಡಿಸಲು ಉಪವಿಭಾಗಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಅ. 15. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯು ಬಡವರಿಗೆ ಉಪಯೋಗಕಾರಿಯಾಗಿದ್ದು ಈ ಯೋಜನೆಯ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕು, ಜನರಿಗೆ ಮಾಹಿತಿ ನೀಡಬೇಕು ಎಂದು ಮಂಗಳೂರು ತಾಲೂಕು ಸಹಾಯಕ ಆಯುಕ್ತ ಹರ್ಷವರ್ಧನ್ ತಿಳಿಸಿದ್ದಾರೆ. ಅವರು ಸೋಮವಾರ ನಗರದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವು ಹುಟ್ಟಿನಿಂದ ಮಕ್ಕಳಲ್ಲಿ ಕಂಡು ಬರುವ ನ್ಯೂನತೆ ಪತ್ತೆ ಹಚ್ಚಿ ಉಚಿತ ಚಿಕಿತ್ಸೆಯನ್ನು ನೀಡುವ ಯೋಜನೆಯಾಗಿದೆ. ಇದರಡಿ ಬರುವ ಸಿಬ್ಬಂದಿ ತಾಲೂಕಿನಲ್ಲಿನ ಅಂಗನವಾಡಿಗಳು ಸೇರಿದಂತೆ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಂಡು ಬರುವ 18 ವರ್ಷದೊಳಗಿನ ನ್ಯೂನತೆ ಇರುವ ಮಕ್ಕಳನ್ನು ಗುರುತಿಸಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು ಜನಸಾಮಾನ್ಯರಿಗೆ ಇದರ ಬಗ್ಗೆ ಮಾಹಿತಿಯನ್ನು ಒದಗಿಸಿ ಜನಸಾಮಾನ್ಯರಿಗೆ ಉಪಯೋಗವಾಗುವಂತೆ ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

Also Read  ಲಾರಿ ಢಿಕ್ಕಿ ಹೊಡೆದು ಆನೆ ಮೃತ್ಯು

ಪಂಚಾಯತ್ ಸಭೆ ಹಾಗೂ ಗ್ರಾಮ ಸಭೆಗಳಲ್ಲಿ ಸಂಬಂಧಪಟ್ಟ ಆರ್‍.ಬಿಎಸ್‍.ಕೆ ತಂಡದವರು ಹಾಗೂ ಪಿಎಚ್‍.ಸಿ ವೈದ್ಯಾಧಿಕಾರಿಯವರು ಹೆಚ್ಚಿನ ಪ್ರಚಾರ ನೀಡುವಂತೆ ಸೂಚಿಸಿದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಜಿಲ್ಲೆಯಾದ್ಯಂತ ಎನ್‍.ಎಸ್‍.ಎಸ್ ಮತ್ತು ಎನ್‍.ಸಿಸಿ ವಿದ್ಯಾರ್ಥಿಗಳನ್ನು ಸೇರಿಸಿ ರೋಸ್ ಕ್ಯಾಂಪೇನ್ ನಡೆಸಬೇಕು. ತಂಬಾಕು ಮಾರಾಟ ಮಾಡುವಂತಹ ಅಂಗಡಿಗಳಿಗೆ ತೆರಳಿ ಗುಲಾಬಿ ನೀಡುವ ಮೂಲಕ ತಂಬಾಕು ಮಾರಾಟ ಮಾಡದಂತೆ ಮನವೊಲಿಸಬೇಕು ಎಂದರು. ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಮನ್ವಯದೊಂದಿಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಒಂದು ಗ್ರಾಮವನ್ನು ತಂಬಾಕು ಮುಕ್ತ ಗ್ರಾಮ ಎಂದು ಘೋಷಿಸಬೇಕು. ಆರೋಗ್ಯ ಕ್ಷೇಮ ಕೇಂದ್ರದ ಮಟ್ಟದ ಸಮುದಾಯ ಆರೋಗ್ಯ ಅಧಿಕಾರಿಗಳ ವತಿಯಿಂದ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಉಪವಿಭಾಗಾಧಿಕಾರಿಗಳು ಸೂಚಿಸಿದರು.

ಬಿಎಲ್.ಒ ಕೆಲಸವನ್ನು ಆಶಾ ಕಾರ್ಯಕರ್ತರು ಮಾಡುತ್ತಿರುವುದರಿಂದ ಹೆಚ್ಚಿನ ಕೆಲಸದ ಒತ್ತಡ ಎದುರಾಗುತ್ತಿದೆ ಎಂದು ಆಶಾ ಕಾರ್ಯಕರ್ತೆಯೊಬ್ಬರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ವಲಸೆ ಕಾರ್ಮಿಕರ ಪ್ರದೇಶಗಳನ್ನು ಪತ್ತೆ ಮಾಡಿ ವಲಸೆ ಕಾರ್ಮಿಕರ ಮಕ್ಕಳಿಗೆ ಸರಿಯಾದ ಸಮಯಕ್ಕೆ ಚುಚ್ಚುಮದ್ದುಗಳನ್ನು ನೀಡಲು ಕಾರ್ಯನಿರ್ವಹಿಸಬೇಕು ಎಂದರು. ಈ ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಭಂಡಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

error: Content is protected !!
Scroll to Top