(ನ್ಯೂಸ್ ಕಡಬ) newskadaba.com ಅ. 14 . ಅಲ್ಲಲ್ಲಿ ಉಂಟಾಗುತ್ತಿರುವ ಭೂಕುಸಿತದಿಂದಾಗಿ ರಾಜ್ಯದ ಅಪಾಯಕಾರಿ ಪ್ರದೇಶಗಳ ಬಗ್ಗೆ ಪರೀಲನೆಗೆ ಸರಕಾರ ಆದೇಶಿಸಿದ್ದು, ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲು, ಚಾರ್ಮಾಡಿ ಘಾಟಿಗಳು ಸಂಭಾವ್ಯ ಭೂಕುಸಿತದ ಅಪಾಯಕಾರಿ ತಾಣಗಳಾಗಿ ಪರಿಣಮಿಸಿವೆ ಎಂದು ಭೌಗೋಳಿಕ ಸರ್ವೆಯೊಂದು ವರದಿ ಮಾಡಿದೆ.
ಈ ವರ್ಷದ ಮಳೆಗಾಲದಲ್ಲಿ ಅಂದರೆ ಜುಲೈ ತಿಂಗಳಿನಲ್ಲಿ ನಡೆದ ಕೇರಳದ ವಯನಾಡು ಗುಡ್ಡ ಕುಸಿತ ದುರಂತದ ಬಳಿಕ ಕರ್ನಾಟಕದಲ್ಲಿಯೂ ಸಂಭಾವ್ಯ ಅಪಾಯಕರ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಯೋಲಾಜಿಕಲ್ ಸರ್ವೇ ತಂಡದೊಂದಿಗೆ ತನಿಖೆಗೆ ಸರ್ಕಾರ ಆದೇಶಿಸಿತ್ತು. ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳ ಬಗ್ಗೆ ಸಮೀಕ್ಷೆ ನಡೆಸಿದ ತಂಡವು ವರದಿಯನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ಗೆ ಸಲ್ಲಿಸಿದ್ದು, ವರದಿಯಲ್ಲಿ ಅನೇಕ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಇತ್ತೀಚೆಗೆ ಮಿತಿಮೀರುತ್ತಿರುವ ಅವೈಜ್ಞಾನಿಕ ಕಾಮಗಾರಿ, ವಾಹನಗಳ ಅತಿಯಾದ ದಟ್ಟಣೆ, ಅತಿಹೆಚ್ಚು ಮಳೆಯಿಂದ ಗುಡ್ಡ, ಭೂ ಕುಸಿತಗಳು ಸಂಭವಿಸುತ್ತಿವೆ. ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲು, ಚಾರ್ಮಾಡಿ ಘಾಟಿ ಬಹಳ ಅಪಾಯಕಾರಿ ಪ್ರದೇಶಗಳಾಗಿ ಪರಿಣಮಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲುಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ. ಶೇ. 80ರಷ್ಟು ಅವೈಜ್ಞಾನಿಕ ಕಾಮಗಾರಿಯಿಂದ ಪಶ್ಚಿಮ ಘಟ್ಟಗಳ ಸಾಲು, ಮಲೆನಾಡು ಭಾಗದಲ್ಲಿ ಭೂಕುಸಿತದ ಭೀತಿ ಉಂಟಾಗಿದೆ ಎಂದು ವರದಿ ತಿಳಿಸಿದೆ.
ಅಷ್ಟೇ ಅಲ್ಲದೇ, ಚಿಕ್ಕಮಗಳೂರು ಜಿಲ್ಲೆಯ 88 ಅಪಾಯಕಾರಿ ಸ್ಥಳಗಳ ಬಗ್ಗೆ ವರದಿಯಲ್ಲಿ ಮಾಹಿತಿ ನೀಡಲಾಗಿದ್ದು, ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲು, ಚಾರ್ಮಾಡಿ ಘಾಟಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 88 ಅತ್ಯಂತ ಅಪಾಯಕಾರಿ ಸ್ಥಳಗಳಿವೆ ಎಂದು ಉಲ್ಲೇಖಿಸಿರುವ ವರದಿ, ಆ ಸ್ಥಳಗಳ ಹೆಸರನ್ನೂ ಕೂಡಾ ಉಲ್ಲೇಖಿಸಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ಗುಡ್ಡ, ಭೂ ಕುಸಿತ ಸಂಭವಿಸುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ರಸ್ತೆ ಕಾಮಗಾರಿ ಮಾಡದೆ ಅವಾಂತರ ಸೃಷ್ಟಿಯಾಗಿದೆ ಎಂದು ವರದಿ ಹೇಳಿದೆ. ಅತಿಹೆಚ್ಚು ಕಾಮಗಾರಿಗಳಿಂದ ಪಶ್ಚಿಮ ಘಟ್ಟಗಳ ಸಾಲಿಗೆ ಹಾನಿಯಾಗುತ್ತಿದೆ ಎಂದು ಹೇಳಿದೆ. ಒಂದು ವಾರ ಕಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಂಡ ಸರ್ವೇ ನಡೆಸಿತ್ತು. ಇದೀಗ ಅಂತಿಮವಾಗಿ ವರದಿ ಸಲ್ಲಿಕೆ ಮಾಡಿದೆ.