(ನ್ಯೂಸ್ ಕಡಬ)newskadaba.com, ಅ. 12 ಹುಬ್ಬಳ್ಳಿ: ರಾಜ್ಯ ಸರ್ಕಾರ ಸರಿಯಾಗಿ ಹಣಕಾಸು ನಿರ್ವಹಿಸಲಾಗದೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
2016-17ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಇದ್ದ ಹಣಕಾಸು ಆಯೋಗ ಅನುದಾನ ಹಂಚಿಕೆ ನಿಗದಿಪಡಿಸಿದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎನಿಸಿದ್ದರೆ ಆಯೋಗದ ಮುಂದೆ ಆಗಲೇ ಸಮರ್ಪಕ ವಾದ ಮಂಡಿಸಬೇಕಿತ್ತು. ಆಗ ಧ್ವನಿ ಎತ್ತದೆ ಈಗ ತಗಾದೆ ತೆಗೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಸರ್ಕಾರದಲ್ಲಿನ ಅಧಿಕಾರಿಗಳೇ ತಪ್ಪು ಮಾಡಿದ್ದಾರೆ ಎಂಬುದನ್ನು ಸಿಎಂ ಒಪ್ಪಿಕೊಂಡಿದ್ದಾರೆ. ಈಗಲಾದರೂ ಹಣಕಾಸು ಆಯೋಗದ ಮುಂದೆ ಸರಿಯಾದ ವಾದ ಮಂಡಿಸಿ ಎಂದು ಸಲಹೆ ನೀಡಿದ ಅವರು, ಪ್ರತಿ 5 ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚಿಸುತ್ತಿದ್ದು, ಈಗ ಮತ್ತೊಮ್ಮೆ ರಚನೆ ನಡೆದಿದೆ. ಹೊಸ ಹಣಕಾಸು ಆಯೋಗದ ಮುಂದಾದರೂ ರಾಜ್ಯಕ್ಕೆ ಏನು ಬೇಕೆಂಬುದನ್ನು ಸರಿಯಾಗಿ ಮಂಡಿಸಿ ಎಂದರು.