(ನ್ಯೂಸ್ ಕಡಬ)newskadaba.com, ಅ. 11 ಬೆಳಾಗಾವಿ: ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಗೋವಾ ಸರ್ಕಾರ ಒಡ್ಡುತ್ತಿರುವ ಅಡೆತಡೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕವು ಯಾವುದೇ ವಿಳಂಬವಿಲ್ಲದೆ ಯೋಜನೆಗೆ ಅಗತ್ಯ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದು, ಸುಪ್ರೀಂ ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿಲ್ಲ ಎಂದು ತಿಳಿಸಿದೆ.
ಅಕ್ಟೋಬರ್ 9 ರಂದು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎನ್‌ಬಿಡಬ್ಲ್ಯು) 80 ನೇ ಸ್ಥಾಯಿ ಸಮಿತಿ ಸಭೆಯಲ್ಲಿ ಕಣಕುಂಬಿಯಲ್ಲಿ ಕಳಸಾ-ಬಂಡೂರಿ ಯೋಜನೆಯಡಿ ನೀರನ್ನು ತಿರುಗಿಸುವ ಬಗ್ಗೆ ಚರ್ಚಿಸಲಾಯಿತು. ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ನಡುವಿನ ಹುಲಿ ಕಾರಿಡಾರ್‌ನಿಂದ 10.68 ಹೆಕ್ಟೇರ್ ಅರಣ್ಯ ಭೂಮಿಯನ್ನು ಡೈವರ್ಶನ್ ವೇರ್, ಪಂಪ್‌ಹೌಸ್, ವಿದ್ಯುತ್ ಸಬ್‌ಸ್ಟೇಷನ್, ಪೈಪ್‌ಲೈನ್ ಮತ್ತು ನಿರ್ಮಾಣ ಚುಟುವಟಿಕೆಗಾಗಿ ಬಳಸಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆ ಸಭೆಯಲ್ಲಿ ಚರ್ಚೆಯ ಪ್ರಮುಖ ಅಜೆಂಡಾವಾಗಿತ್ತು. ಖಾನಾಪುರ ತಾಲೂಕಿನಲ್ಲಿ ಕಳಸಾ ನಾಲಾ ತಿರುವು ಯೋಜನೆ ನಿರ್ಮಾಣಕ್ಕಾಗಿ ಕಣಕುಂಬಿ ಮತ್ತು ಇತರ ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ಲೈನ್ ಅಳವಡಿಸುವುದನ್ನೂ ಇದು ಒಳಗೊಂಡಿದೆ.ಕರ್ನಾಟಕದ ಮನವಿಯನ್ನು ಆಲಿಸಿದ ಎನ್‌ಬಿಡಬ್ಲ್ಯು ಸ್ಥಾಯಿ ಸಮಿತಿ, ಯೋಜನೆಯ ಸ್ಥಿತಿಗತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯದ ಪ್ರತಿನಿಧಿಗಳಿಗೆ ಸೂಚಿಸಿದೆ. ಜತೆಗೆ, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ. ಯೋಜನೆಯ ಅನುಷ್ಠಾನದಿಂದ ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.