(ನ್ಯೂಸ್ ಕಡಬ) newskadaba.com ಅ. 11. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೀಯ ಜಂಬೂಸವಾರಿ ಮೆರವಣಿಗೆಗೆ ನಾಳೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಅಕ್ಟೋಬರ್ 12ರ ಶನಿವಾರ ಸಂಜೆ 4 ರಿಂದ 4:30ರೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಮೈಸೂರು ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮಧ್ಯಾಹ್ನ 1.41ರಿಂದ 2.10ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿರುವರು. ನಂತರ ಸಂಜೆ 4 ರಿಂದ 4.30 ಗಂಟೆ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆಯ ಆವರಣದಲ್ಲಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿತ ನಾಡ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡಲಿದ್ದಾರೆ.
ಈ ಬಾರಿಯ ದಸರಾ ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಸಾಗಿ ಬರಲಿದೆ. ಇದರೊಂದಿಗೆ 60ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಸರ್ಕಾರದ ಸಾಧನೆ, ಗ್ಯಾರಂಟಿ ಯೋಜನೆ, ಸಂವಿಧಾನ ಪ್ರಜಾಪ್ರಭುತ್ವ, ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರ, ಬುಡಕಟ್ಟು ಪರಂಪರೆಯಂತಹ ವೈವಿಧ್ಯಮ ಸ್ಥಬ್ಧ ಚಿತ್ರಗಳು ವಿಜಯದಶಮಿ ಮೆರವಣಿಗೆಯಲ್ಲಿ ಸಾಗಿ ಬರಲಿವೆ.
ಕರ್ನಾಟಕ ಪೊಲೀಸ್ ವಾದ್ಯ, ಅಶ್ವದಳ ಅಂಬಾರಿ ಹೊರುವ ಅಭಿಮನ್ಯು ಜೊತೆ ಲಕ್ಷ್ಮಿ ಮತ್ತು ಹಿರಣ್ಯ ಸಾತ್ ನೀಡಲಿದ್ದಾರೆ . ಇವರೊಂದಿಗೆ ಕೆಎಸ್‌ಆರ್‌ಪಿ ತುಕಡಿಗಳು, ಅರಮನೆಯ ಲಾಂಛನಗಳು, ಡೊಳ್ಳು ಕುಣಿತ, ಪಟದ ಕುಣಿತ, ವೀರಗಾಸೆ, ಕರಡಿ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪ್ರೇಕ್ಷಕರ ಮನ ಸೆಳೆಯಲಿದೆ.
ಅರಮನೆಯಿಂದ ಹೊರಡಲಿರುವ ಜಂಬೂ ಸವಾರಿ ಮೆರವಣಿಗೆಯು ಉತ್ತರ ದ್ವಾರದ ಮೂಲಕ ತೆರಳಿ ಕೆಆರ್ ಸರ್ಕಲ್, ಸಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಸರ್ಕಲ್, ಬಂಬೂ ಬರ್ಜಾ, ಹೈವೇ ಸರ್ಕಲ್ ಮೂಲಕ ಸಾಗಿ ಸಂಜೆ ವೇಳೆಗೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ತಲುಪಲಿದೆ. ಇದೇ ದಿನ ಸಂಜೆ ಬನ್ನಿಮಂಟಪ ಮೈದಾನದಲ್ಲಿ ಅತ್ಯಾಕರ್ಷಕ ಪಂಜಿನ ಕವಾಯತು ಪ್ರದರ್ಶನ ಸಹ ನಡೆಯಲಿದೆ.
ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ, ಸಚಿವರುಗಳಾದ ಶಿವರಾಜ್ ತಂಗಡಗಿ ಸೇರಿದಂತೆ ಸಂಪುಟದ ಇನ್ನಿತರ ಸಚಿವರು, ಶಾಸಕರು, ಸಂಸತ್ ಸದಸ್ಯರು ಭಾಗವಹಿಸಲಿದ್ದಾರೆ. ಇವರೊಂದಿಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸೇರಿದಂತೆ ಹಲವು ಅಧಿಕಾರಿಗಳು, ಗಣ್ಯರು ಸಹ ಭಾಗವಹಿಸಲಿದ್ದಾರೆ.