(ನ್ಯೂಸ್ ಕಡಬ) newskadaba.com ಅ. 11. ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಶಾಲಾ-ಕಾಲೇಜು, ಕಂಪೆನಿ ಹಾಗೂ ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಈ ಕುರಿತು ತನ್ನ ನಿವಾಸದಲ್ಲಿ ಆಯುಧ ಪೂಜೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 1 ನಮಗೆ ರೋಮಾಂಚನ ದಿನ. ಈ ವರ್ಷ 50ನೇ ವರ್ಷದ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಸ್ವಾತಂತ್ರ‍್ಯ ದಿನದ ರೀತಿ ಸಂಭ್ರಮಿಸಬೇಕು ಎಂದು ತಿಳಿಸಿದರು.
ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಬೇಕು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆಚರಣೆ ಮಾಡಿ ನಿಮ್ಮ ಸಂಸ್ಥೆಯಲ್ಲಿ ಏನು ಮಾಡಿದ್ದೀರಿ ಎನ್ನುವುದಕ್ಕೆ ನಾವು ನೀಡುವ ನಂಬರ್‌ಗೆ ಪೋಸ್ಟ್ ಮಾಡಬೇಕು. ಕನ್ನಡ ಭೂಮಿಯಲ್ಲಿ ಕನ್ನಡ ಕಲಿಯಬೇಕಾಗಿರೋದು ಎಲ್ಲರಿಗೂ ಕಡ್ಡಾಯ ಎಂದು ಹೇಳಿದರು. ಕನ್ನಡ ಬಾವುಟ ಕಡ್ಡಾಯ ಮಾಡಿದ್ದನ್ನು ಕನ್ನಡ ಸಂಘಟನೆಗಳು ದುರುಪಯೋಗ ಮಾಡಿಕೊಳ್ಳಬಾರದು. ಯಾರು ಕಾರ್ಖಾನೆ, ಕಂಪನಿಗಳಿಗೆ ಒತ್ತಡ, ಕಿರುಕುಳ ನೀಡಬಾರದು. ಕನ್ನಡ ಸಂಘಟನೆಗಳು ಯಾರು ಯಾರಿಗೂ ಹೆದರಿಸಬಾರದು. ಹಾಗೆ ಏನಾದರೂ ಒತ್ತಡ ಹೇರಿದರೆ ಅಂತಹ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.