(ನ್ಯೂಸ್ ಕಡಬ) newskadaba.com ಅ. 11. ಕಳೆದ ಆರು ದಿನಗಳಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳ ನೌಕಕರು ಹೂಡಿದ್ದ ಮುಷ್ಕರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೆಗೆದುಕೊಂಡ ನಿರ್ಧಾರಗಳಿಂದ ಅಂತ್ಯ ಕಂಡಿದೆ. ಅಲ್ಲದೇ ಎಂದಿನಂತೆ ಕಚೇರಿ ಕಾರ್ಯಗಳಲ್ಲಿ ನಿರತರಾಗುವುದಾಗಿ ನೌಕರ ಸಂಘದ ಪ್ರತಿನಿಧಿಗಳು ಘೋಷಿಸಿರುವುದಾಗಿ ವರದಿಯಾಗಿದೆ.
ಗುರುವಾರದಂದು ವಿಕಾಸಸೌಧದಲ್ಲಿ ನಡೆದ ಸಂಧಾನ ಸಭೆಯಲ್ಲಿ ಪಾಲ್ಗೊಂಡ ನೌಕರರ ಮಹಾ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ನಿಯೋಗವು, ತಮ್ಮ ಬೇಡಿಕೆಗಳನ್ನು ಸಚಿವರ ಮುಂದಿರಿಸಿದರು. ಸುಮಾರು 75ಕ್ಕೂ ಹೆಚ್ಚು ಬೇಡಿಕೆಗಳನ್ನು ಆಲಿಸಿದ ಪ್ರಿಯಾಂಕ್ ಖರ್ಗೆ, ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗಬಹುದಾದ ಎಲ್ಲ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಆದ್ಯತೆಯ ಮೇರೆಗೆ ಈಡೇರಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಭಡ್ತಿ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸುವುದಾಗಿ ಪ್ರಕಟಿಸಿದ ಅವರು, ಮೂರು ತಿಂಗಳ ಕಾಲಮಿತಿಯೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು. ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ತಮ್ಮ ಹಿತಾಸಕ್ತಿಗಳಿಗಾಗಿ ಹೋರಾಟ ಮಾಡುವುದು ಎಷ್ಟು ಮುಖ್ಯವೋ, ಸಾರ್ವಜನಿಕ ಸೇವೆಯ ಮೂಲಕ ಗ್ರಾಮೀಣ ಜನರ ಹಿತಾಸಕ್ತಿಗಳನ್ನು ಕಾಪಾಡಲು ಅಷ್ಟೇ ಬದ್ಧತೆಯನ್ನು ಹೊಂದಿರಬೇಕಾಗುತ್ತದೆ ಎಂಬ ಕಿವಿಮಾತನ್ನೂ ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ಹೇಳಿದರು.