“ಅಕ್ಟೋಬರ್ 12- ವಿಶ್ವ ಆಥ್ರೈಟಿಸ್ ದಿನ”; ಡಾ.ಚೂಂತಾರು

(ನ್ಯೂಸ್ ಕಡಬ) newskadaba.com  ಅ. 11. ನಮ್ಮ ದೇಹದಲ್ಲಿ ನೂರಾರು ಕೀಲುಗಳು ಇದೆ. ಬಹುತೇಕ ಕೀಲುಗಳು ಬಹಳ ಸಂಕೀರ್ಣವಾದ ರಚನೆ ಹೊಂದಿದೆ. ಈ ಕೀಲುಗಳಿಗೆ ಉಂಟಾಗುವ ಉರಿಯೂತ ಮತ್ತು ನೋವನ್ನು ಸಂಧಿವಾತ ಅಥವಾ ಆಥ್ರೈಟಿಸ್ ಎಂದು ಕರೆಯುತ್ತಾರೆ. ಈ ಸಂಧಿವಾತದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು 1996ರಿಂದ ಈ ವಿಶ್ವ ಸಂಧಿವಾತ ದಿನ ಆಚರಣೆಯನ್ನು ಆರಂಭ ಮಾಡಲಾಯಿತು.

 

ಮಂಡಿನೋವು ಎಂಬ ನರಕಯಾತನೆ

ಮಂಡಿನೋವು ಎಂದಾಕ್ಷಣ ಜನರು ತಮಗೆ ಸಂಧಿವಾತ ಅಥವಾ ಅರ್ಥೈಟಿಸ್ ಬಂದಿದೆ ಎಂದು ಜನರು ದಿಗಿಲುಗೊಳ್ಳುತ್ತಾರೆ. ಮೊಣಕಾಲು ನೋವು ಅಥವಾ ಮಂಡಿನೋವು ಬಂದಾಕ್ಷಣ ಜನರು ತಮಗೆ ಕೀಲು ಬದಲಾವಣೆ ಅಥವಾ ಮಂಡಿ ಬದಲಾವಣೆ ಮಾಡಬೇಕು ಎಂದು ಯೋಚಿಸುವುದು ಬಹಳ ಸಹಜವಾಗಿದೆ. ಆದರೆ ಎಲ್ಲಾ ಮಂಡಿನೋವುಗಳು ಸಂಧಿವಾತ ಅಲ್ಲ ಎಂಬುದು ನಂಬಲೇಬೇಕಾದ ಸತ್ಯ.

ಮಂಡಿನೋವು ಏಕೆ ಮತ್ತು ಹೇಗೆ ? 

ನಮ್ಮ ದೇಹದ ಅತೀ ದೊಡ್ಡ ಕೀಲುಗಳಲ್ಲಿ ಮೊಣಕಾಲು ಕೂಡಾ ಒಂದು. ಇದರಲ್ಲಿ ಮೂರು ಎಲುಬುಗಳು ಇರುತ್ತದೆ. ಮೇಲಿನ ಕಾಲಿನ ಎಲುಬನ್ನು ಫೀಮರ್ ಎಂದೂ ಕೆಳಗಿನ ಕಾಲಿನ ದೊಡ್ಡ ಎಲುಬನ್ನು ಟಿಬಿಯಾ ಎಂದೂ ಕರೆಯುತ್ತಾರೆ. ಕೆಳಗಿನ ಕಾಲಿನ ಸಣ್ಣ ಎಲುಬನ್ನು ಫಿಬುಲಾ ಎಂದೂ ಕರೆಯುತ್ತಾರೆ. ಈ ಫಿಬುಲಾ ಒಳಭಾಗದಲ್ಲಿ, ಫಿಬುಲಾ ಮತ್ತು ಫೀಮರ್ ಎಲುಬು ಸಂಧಿಸುವ ಜಾಗದ ನಡುವೆ ಕಾರ್ಟಿಲೇಜ್ ಎಂಬ ನಯವಾದ ಪದರವಿರುತ್ತದೆ. ಇದು ಎರಡು ಎಲುಬಿನ ನಡುವೆ ಕುಶನ್ ರೀತಿಯಲ್ಲಿ ವರ್ತಿಸುತ್ತದೆ ಮತ್ತು ಎರಡು ಎಲುಬಿನ ನಡುವಿನ ಘರ್ಷಣೆಯನ್ನು ತಪ್ಪಿಸುತ್ತದೆ. ನೋವಿಲ್ಲದೆ ಕಾಲನ್ನು ಮಡಿಸಲು ಮತ್ತು ಓಡಾಡಲು ಈ ಪದರ ಅತೀ ಅಗತ್ಯ.  ವಯಸ್ಸಾದಂತೆ ಕಾರ್ಟಿಲೇಜ್ ಪದರ ತನ್ನು ಕಾರ್ಯಕ್ಷಮತೆಯನ್ನು ಕಳೆದುಕೊಂಡು ತೆಳುವಾಗುತ್ತಾ ಹೋಗುತ್ತದೆ. ನಮ್ಮ ಜೀವನ ಶೈಲಿ, ಆಹಾರಪದ್ಧತಿ, ದೇಹದ ತೂಕ, ರಸದೂತಗಳ ಏರುಪೇರು ಮತ್ತು ನಾವು ಸೇವಿಸುವ ಔಷಧಿಗಳು ಎಲ್ಲವೂ ಸೇರಿ ಈ ಕಾರ್ಟಿಲೇಜ್ ಪದರ ತನ್ನತನವನ್ನು ಕಳೆದುಕೊಳ್ಳುತ್ತದೆ. ಕಾರ್ಟಿಲೇಜ್ ಪದರ ಹಾಳಾದಾಗ ಮೊಣಕಾಲು ಎಲುಬುಗಳು ಒಂದಕ್ಕೊಂದು ತಾಗಿಕೊಂಡು ಘರ್ಷಣೆ ಉಂಟಾಗಿ ಮಂಡಿನೋವಿಗೆ ಮುನ್ನುಡಿ ಬರೆಯುತ್ತದೆ.

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

 

ಏನಿದು ಆಥ್ರೈಟಿಸ್ ? 

ಆಥ್ರೈಟಿಸ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಸಂಧಿವಾತ ಎನ್ನುವುದು ಹತ್ತು ಹಲವು ರೋಗಗಳ ಲಕ್ಷಣವಾಗಿದ್ದು, ಎಲುಬಿನ ನಡುವೆ ಇರುವ ಕಾರ್ಟಿಲೇಜ್ ಪದರ ಹಾಳಾಗಿ ಉರಿಯೂತ ಉಂಟಾಗುತ್ತದೆ. ಸುಮಾರು 100ಕ್ಕೂ ಹೆಚ್ಚು ರೀತಿಯ ಸಂಧಿವಾತಗಳು ಇದ್ದು, ಹಲವಾರು ಕಾರಣಗಳಿಂದ ಈ ಸಂಧಿವಾತ ಉಂಟಾಗಬಹುದು. ಎಲ್ಲಾ ವಯಸ್ಸಿನ ಜನರು, ಎಲ್ಲಾ ಲಿಂಗಗಳ ಜನರು ಮತ್ತು ಎಲ್ಲಾ ಜನಾಂಗದ ಜನರಲ್ಲಿ ಸಮಾನವಾಗಿ ಇದು ಕಂಡು ಬರುತ್ತದೆ. ಅಮೇರಿಕಾ ದೇಶವೊಂದರಲ್ಲಿಯೇ ಸುಮಾರು 50 ಲಕ್ಷ ವಯಸ್ಕರು ಮತ್ತು 3 ಲಕ್ಷ ಮಕ್ಕಳು ಈ ಸಂಧಿವಾತದಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ದೈಹಿಕ ಅಂಗವೈಕಲ್ಯಕ್ಕೆ ಇದೊಂದು ಪ್ರಮುಖ ಕಾರಣ ಎಂದೂ ತಿಳಿದು ಬಂದಿದೆ. ಮಹಿಳೆಯರಲ್ಲಿ ಹೆಚ್ಚು ಕಂಡು ಬರುವ ಈ ಸಂಧಿವಾತ, ವಯಸ್ಸಾದಂತೆ ಈ ಸಂಧಿವಾತರೋಗ ಬರುವ ಸಾಧ್ಯತೆ ಹೆಚ್ಚಾಗುತ್ತದೆ.

ಆಥ್ರೈಟಿಸ್‍ಗೆ ಕಾರಣಗಳು ಏನು ? 

ಸಂಧಿವಾತಕ್ಕೆ ನೂರಾರು ಕಾರಣಗಳಿದ್ದು, ಅತಿಯಾದ ಗಂಟುಗಳ ಬಳಕೆಯಿಂದ ಉಂಟಾದ ಸವೆತದಿಂದ ಬರುವ ಸಂಧಿವಾತವನ್ನು ಆಸ್ಟಿಯೋ ಆಥ್ರೈಟಿಸ್ ಎಂದು ಕರೆಯುತ್ತಾರೆ. ದೇಹದ ಅತಿಯಾದ ರೋಗ ನಿರೋಧಕ ಶಕ್ತಿಯ ಉಲ್ಬಣದಿಂದಾಗಿ ಉಂಟಾಗುವ ಸಂಧಿವಾತವನ್ನು ರುಮಟಾಯಿಡ್ ಆಥ್ರೈಟಿಸ್ ಎನ್ನುತ್ತಾರೆ.

ಸಂಧಿವಾತಕ್ಕೆ ಮುಖ್ಯ ಕಾರಣಗಳು

  1. ಅತಿಯಾದ ದೇಹತೂಕ ಅಥವಾ ಬೊಜ್ಜು
  2. ಅನುವಂಶಿಕ ಕಾರಣಗಳು
  3. ಅತಿಯಾದ ದೇಹದ ರೋಗ ನಿರೋಧಕ ಕಾರಣಗಳು
  4. ಬ್ಯಾಕ್ಟೀರಿಯಾ ಅಥವಾ ವೈರಾಣು ಸೋಂಕುವಿನ ಕಾರಣಗಳು
  5. ದೇಹದಲ್ಲಿನ ರಸದೂತಗಳ ಏರುಪೇರು ಮತ್ತು ಮೆಟಾಬಾಲಿಕ್ ಕಾರಣಗಳು
  6. ಆಟೋಟಗಳಿಂದ ಉಂಟಾದ ಗಾಯಗಳು.

ಸಂಧಿವಾತದ ಲಕ್ಷಣಗಳು ಏನು ? 

ಮೊಣಕಾಲು ನೋವು ಮತ್ತು ಮೊಣಕಾಲಿನ ಬಿಗಿತನ ಅಥವಾ ಸ್ಟಿಪ್‍ನೆಸ್ ಸಂಧಿವಾತದ ಪ್ರಮುಖ ಲಕ್ಷಣಗಳು. ಆರಂಭದಲ್ಲಿ ನೋವಿಲ್ಲದಿದ್ದರೂ ಕ್ರಮೇಣ ನೋವಿನ ತೀವ್ರತೆ ಹೆಚ್ಚಾಗುತ್ತದೆ.

  • ಕಾಲು ಮಡಿಸುವುದು ಕಷ್ಟವಾಗುತ್ತದೆ.
  • ಸ್ವಲ್ಪ ದೂರ ನಡೆದಾಗಲೂ, ಮಂಡಿನೋವು ಕಂಡುಬರುತ್ತದೆ
  • ಮಹಡಿ ಹತ್ತಿ ಇಳಿಯುವಾಗ, ಮೆಟ್ಟಿಲು ಹತ್ತುವಾಗ ನೋವು ಉಲ್ಬಣಿಸುತ್ತದೆ.
  • ನೆಲದ ಮೇಲೆ ಕುಳಿತುಕೊಳ್ಳಲು, ಮಂಡಿಯೂರಿ ಕೂರಲು ಕಷ್ಟವಾಗುತ್ತದೆ.
  • ಮೊಣಕಾಲಿನ ಸಂಧಿನಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ ಮತ್ತು ಕಾಲು ಮಡಿಸುವಾಗ ಶಬ್ದ ಕೇಳಬಹುದು.
  • ಕುರ್ಚಿಯಿಂದ ಕುಳಿತು ಏಳುವಾಗ ಮೊಣಕಾಲಿನ ಮುಂಭಾಗ ನೋವು ಕಾಣಿಸಿಕೊಳ್ಳುತ್ತದೆ.
Also Read  ➤➤ ವಿಶೇಷ ಲೇಖನ ದಂತ ವೈದ್ಯರ 32 ಸಾಮಾಜಿಕ ಹೊಣೆಗಾರಿಕೆಗಳು ✍? ಡಾ. ಮುರಲೀ ಮೋಹನ್ ಚೂಂತಾರು

 

ಮಂಡಿನೋವಿನ ಪರಿಹಾರ ಹೇಗೆ ? 

ಸವೆದುಹೋದ ಕಾರ್ಟಿಲೇಜ್ ಪದರವನ್ನು ಯಾವುದೇ ರೀತಿಯಲ್ಲಿ ಹೊಸದಾಗಿ ಬೆಳೆಸಲು ಈವರೆಗೆ ವೈದ್ಯಕೀಯ ವಿಜ್ಞಾನದಲ್ಲಿ ಸಾಧ್ಯವಾಗಿಲ್ಲ. ಹಾಗೆಂದ ಮಾತ್ರಕ್ಕೆ ಇದಕ್ಕೆ ಪರಿಹಾರವಿಲ್ಲ ಎಂದರ್ಥವಲ್ಲ. ಆಥ್ರೈಟಿಸ್ ಇರುವವರು ತಮ್ಮ ದೈನಂದಿನ ಚಟುವಟಿಕೆ ಮಾಡುವಂತೆ, ನೋವು ಅಡ್ಡಿಪಡಿಸದಂತೆ, ನೋವು ನಿಯಂತ್ರಣದಲ್ಲಿಡಲು ಔಷಧಿಗಳು ಇದೆ. ಅದರ ಜೊತೆಗೆ ದೇಹದ ತೂಕವನ್ನು ನಿಯಂತ್ರಿಸಿ. ಮಂಡಿಯ ಮೇಲೆ ಜಾಸ್ತಿ ತೂಕ ಬೀಳದಂತೆ ಎಚ್ಚರವಹಿಸಬೇಕು. ನಿರಂತರ ವ್ಯಾಯಾಮ ನಿಯಮಿತವಾದ ನಿಯಂತ್ರಿತವಾದ ಆಹಾರ ಮತ್ತು ಕ್ರೀಯಾಶೀಲವಾದ ಜೀವನ ಶೈಲಿಯಿಂದ ಮಂಡಿನೋವು ಬಾರದಂತೆ ಎಚ್ಚರ ವಹಿಸಲಾಗುತ್ತದೆ. ದೈನಂದಿನ ಬದುಕಿನಲ್ಲಿ ಹೆಚ್ಚು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು ನೋವು ಅರಿವಾಗದಂತೆ ಮಾಡಿ, ದಿನ ನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ.

ಕೊನೆ ಮಾತು : 

ಮೊಣಕಾಲು ನಮ್ಮ ದೇಹದ ಅತಿ ಪ್ರಾಮುಖ್ಯವಾದ ಅಂಗ. ನಮ್ಮ ಎಲ್ಲಾ ದೈನಂದಿನ ಚಟುವಟಿಕೆಗಳಿಗೆ ಮೊಣಕಾಲಿನ ಆರೋಗ್ಯ ಅತೀ ಅಗತ್ಯ. ಮೊಣಕಾಲಿನ ನೋವು ಇರುವವರಿಗೆಲ್ಲಾ ಅಥ್ರೈಟಿಸ್ ಇದೆ ಎನ್ನುವುದು ಸೂಕ್ತವಲ್ಲ. ಮೊಣಕಾಲಿನ ಎಲುಬಿನ ನಡುವೆ ಇರುವ ಕಾರ್ಟಿಲೇಜ್ ಪದರಕ್ಕೆ ಹಾನಿಯಾದಾಗ ಈ ಮಂಡಿನೋವು ಕಂಡು ಬರುತ್ತದೆ. ದಿನಬೆಳಗಾಗುವುದರೊಳಗೆ ಈ ಖಾಯಿಲೆ ಬರುವುದಿಲ್ಲ. ಅತಿಯಾದ ದೇಹದ ತೂಕ ಅನಿಯಂತ್ರಿತ ಆಹಾರ ಸೇವನೆ, ಬೊಜ್ಜುತನ, ರಸದೂತಗಳ ಏರುಪೇರು ಮುಂತಾದ ಕಾರಣಗಳಿಂದ ಮೊಣಕಾಲಿನ ಕಾರ್ಟಿಲೇಜ್ ಪದರ ಹಾನಿಗೊಂಡು ಮಂಡಿನೋವು ಕಂಡು ಬರುತ್ತದೆ. ನಿರಂತರವಾದ ವ್ಯಾಯಾಮ, ಫಿಸಿಯೋಥೆರಪಿ, ದೇಹದ ತೂಕ ಮತ್ತು ಬೊಜ್ಜು ನಿಯಂತ್ರಣ ಮಾಡಿ ಮೊಣಕಾಲಿನ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ಮಾಡಿ ಮಂಡಿನೋವು ಬರದಂತೆ ತಡೆಯಬಹುದಾಗಿದೆ. ಜೀವನಶೈಲಿಗೂ ಮತ್ತು ಮಂಡಿನೋವಿಗೂ ನೇರ ಸಂಬಂಧವಿದೆ. ಆರಂಭಿಕ ಹಂತದಲ್ಲಿ ‘ಕೀ ಹೋಲ್ ಸರ್ಜರಿ’ ಮಾಡಿ ಕಾರ್ಟಿಲೇಜ್ ಪದರವನ್ನು ಸರಿಪಡಿಸಬಹುದು. ಆದರೆ ಮುಂದುವರಿದ ಹಂತದಲ್ಲಿ ಕಾರ್ಟಿಲೇಜ್ ಪದರಕ್ಕೆ ಪೂರ್ಣವಾಗಿ ಹಾನಿಯಾಗಿದ್ದಲ್ಲಿ, ಮಂಡಿಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಬಹುದು. ದಿನವಿಡೀ ಕಾಡುವ ನೋವು, ವಿಪರೀತ ನೋವಿನಿಂದ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾದಾಗ ಮಂಡಿಕೀಲು ಬದಲಾವಣೆ ಅನಿವಾರ್ಯ ಎಂದಾಗ ವೈದ್ಯರು ಸೂಕ್ತ ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸುತ್ತಾರೆ. ಒಟ್ಟಿನಲ್ಲಿ ತಡೆಗಟ್ಟಬಹುದಾದ ಈ ಮಂಡಿನೋವನ್ನು ಸೂಕ್ತ ಮುಂಜಾಗರೂಕತೆ ಬಳಸಿ ತಡೆಗಟ್ಟುವುದರಲ್ಲಿಯೇ ಜಾಣತನ ಅಡಗಿದೆ.

Also Read  ಪುತ್ತೂರು: ಪೊಲೀಸ್ ಠಾಣೆಯ ಬಳಿಯಿಟ್ಟ ದ್ವಿಚಕ್ರ ವಾಹನ ಕಳವು

 

ಡಾ|| ಮುರಲೀ ಮೋಹನ್ ಚೂಂತಾರು

error: Content is protected !!
Scroll to Top