(ನ್ಯೂಸ್ ಕಡಬ) newskadaba.com ಕಡಬ, ಅ. 09. ತುಳುನಾಡ ಸಂಪ್ರದಾಯಗಳು, ಆಚರಣೆಗಳು ತೆರೆಮರೆಗೆ ಸರಿಯುತ್ತಿದೆ ಎನ್ನುವ ಅಪವಾದದ ಕಾಲಘಟ್ಟದಲ್ಲಿ ತುಳುನಾಡ ಆಚರಣೆಗಳನ್ನು ಸಂಪ್ರದಾಯ ಬದ್ದವಾಗಿ ಕಡಬ ತಾಲೂಕು ಗೋಳಿತೊಟ್ಟು ಗ್ರಾಮದ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತುಳುನಾಡಿನ ವಿವಿಧ ಆಚರಣೆಗಳನ್ನು ಆಚರಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಅಂತೆಯೇ ಸೋಮವಾರ ಹೊಸ ಅಕ್ಕಿ ಊಟ, ಕೊರಳ ಪರ್ಬವನ್ನು ಗ್ರಾಮೀಣ ಸೊಗಡಿನಲ್ಲಿ ಆಚರಿಸಲಾಗಿದೆ. ಮಕ್ಕಳು ಕೃಷಿ ಪದ್ದತಿಯನ್ನು ಭವಿಷ್ಯದಲ್ಲಿ ಅಳವಡಿಸಿಕೊಳ್ಳುತ್ತಾರೆ ಎನ್ನುವ ಅಚಲ ನಂಬಿಕೆಯಿಂದ ಶಾಲಾಭಿವೃದ್ದಿ ಸಮಿತಿ, ಶಿಕ್ಷಕರಿಂದ ಈ ಪ್ರಯೋಗ ಮಾಡಲಾಗಿದೆ.
ಊರಿನ ಹಿರಿಯರಾದ ಅಣ್ಣು ಗೌಡ ಕುವೆತ್ತಿಮಾರು ಮಾರ್ಗದರ್ಶನದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಗುರುಂಪು ನೇತೃತ್ವದಲ್ಲಿ ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ ಹಾಗು ಶಿಕ್ಷಕ ವೃಂದದ ಸಹಕಾರದೊಂದಿಗೆ ಕೊರಳ ಪರ್ಬ, ಹೊಸ ಅಕ್ಕಿ ಊಟ ನಡೆಯಿತು. ಸಂಪ್ರದಾಯದಂತೆ ಐವರು ಮಹಿಳೆಯರು ಗಂಗಾಪೂಜೆ ನೆರವೇರಿಸಿ ಹೊಸ ಅಕ್ಕಿ ಊಟ ತಯಾರಿಕೆಯಲ್ಲಿ ತೊಡಗಿಸಿಕೊಡಿದ್ದರು. ಇತರೆ ಮಹಿಳೆಯರು ಸಹಕಾರ ನೀಡಿದರು. ಕೊರಳ ಪರ್ಬಕ್ಕೆ ವೆಂಕಪ್ಪ ಗೌಡ ಎಂಬವರು ಅವರ ಗದ್ದೆಯಿಂದ ಕೊರಳು ಹಾಗು ಅದಕ್ಕೆ ಬೇಕಾದ ಪರಿಕರಗಳನ್ನು ನೀಡಿದರು. ಮಧ್ಯಾಹ್ನ ವಿದ್ಯಾರ್ಥಿಗಳು, ಪೋಷಕರು, ಶಾಲಾಭಿವೃದ್ದಿ ಸಮಿತಿ, ಶಿಕ್ಷಕ ವೃಂದ ಹೊಸ ಅಕ್ಕಿ ಊಟ ಸವಿದರು.
70 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ದಿನದಂದು ಶಾಲೆಗೆ ಒಂದಲ್ಲ ಒಂದು ರೀತಿಯಲ್ಲಿ ಕೊಡುಗೆ ನೀಡುತ್ತಾರೆ. ಹೆಚ್ಚಾಗಿ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯ ಹಮ್ಮಿಕೊಳ್ಳುತ್ತಾರೆ. ವ್ಯವಸ್ಥಿತ ಅಕ್ವೇರಿಯಂ, ರಂಗ ಮಂದಿರ , ವಿಶಾಲವಾದ ಆಟದ ಮೈದಾನ ಶಾಲೆಯ ಅಂದವನ್ನು ಹೆಚ್ಚಿಸಿದೆ. ಸ್ಪೋಕನ್ ಇಂಗ್ಲೀಷ್, ಭರತನಾಟ್ಯ, ಭಾಷಣ ಕಲೆ, ಯಕ್ಷಗಾನ ತರಬೇತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇತ್ತೀಚೆಗೆ 6 ತಿಂಗಳ ತರಬೇತಿ ಪಡೆದ ವಿದ್ಯಾರ್ಥಿಗಳು 4 ಗಂಟೆಯ ದೇವಿ ಮಹಾತ್ಮೆ ಯಕ್ಷಗಾನವನ್ನು ಪ್ರದರ್ಶಿಸಿ ಪ್ರತಿಭೆ ಅನಾವರಣಗೊಳಿಸಿದ್ದಾರೆ.
ಕದಿಕೆ- ಈ ಶಾಲೆಯಲ್ಲಿ ಪ್ರಾಚೀನ ವಸ್ತುಗಳ ಸಂಗ್ರಹಾಲಯವಿದೆ. ಇದಕ್ಕೆ ಕದಿಕೆ ಎನ್ನುವ ನಾಮಕರಣ ಮಾಡಲಾಗಿದೆ. ಅಳಿವಿನಂಚನಲ್ಲಿರುವ ಸುಮಾರು 200ಕ್ಕೂ ಹೆಚ್ಚು ಪ್ರಾಚ್ಯ ವಸ್ತುಗಳು ಇಲ್ಲಿವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಪ್ರೇಮಿಗಳು ಸಹಕಾರದಿಂದ ವಸ್ತುಗಳ ಸಂಗ್ರಹ ಮಾಡಲಾಗುತ್ತಿದೆ.
ಪ್ರಾಮಾಣಿಕ ಮಳಿಗೆ- ವಿದ್ಯಾರ್ಥಿಗಳಿಗೆ ಪ್ರಾಮಾಣಿಕ ಮಳಿಗೆ ಎನ್ನುವ ಶಿಕ್ಷಣಕ್ಕೆ ಸಂಬಂಧಪಟ್ಟ ವ್ಯಾಪಾರ ಮಳಿಗೆಯೊಂದಿದೆ. ಇಲ್ಲಿ ವ್ಯಾಪಾರಿ ಇರುವುದಿಲ್ಲ. ಗ್ರಾಹಕ ವಿದ್ಯಾರ್ಥಿ ತಮಗೆ ಬೇಕಾದ ವಸ್ತುವನ್ನು ಖರೀದಿಸಿ ಅದರ ಹಣವನ್ನು ಅಲ್ಲೇ ಇಟ್ಟಿರುವ ಡಬ್ಬದೊಳಗೆ ಹಾಕಬೇಕು. ಚಿಲ್ಲರೆ ಬೇಕಿದ್ದಲ್ಲಿ ಆ ಡಬ್ಬದಿಂದ ಪಡೆಯಬೇಕು ಈ ಪ್ರಯೋಗ ವಿದ್ಯಾರ್ಥಿಯಲ್ಲಿ ಪ್ರಾಮಾಣಿಕತೆ ಮೂಡಿಬರಲು ಸಹಕಾರಿಯಾಗಿದೆ- ಪ್ರದೀಪ್ ಬಾಕಿಲ, ಮುಖ್ಯಶಿಕ್ಷಕ
ಶಾಲಾ ಶಿಕ್ಷಣದೊಂದಿಗೆ ಪಠ್ಯೇತರ ವಿಚಾರಗಳನ್ನು ಅಳವಡಿಸಿಕೊಂಡಾಗ ವಿದ್ಯಾರ್ಥಿಯ ಭವಿಷ್ಯದಲ್ಲಿ ಉಪಯೋಗಕ್ಕೆ ಬರಬಹುದು ಎನ್ನುವ ಆಶಯದೊಂದಿಗೆ ವಿವಿಧ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ತುಳುನಾಡ ಆಚರಣೆಗಳ ಅರಿವು ಮೂಡಿಸುವ ಸಲುವಾಗಿ ಸಂಪ್ರದಾಯಬದ್ದವಾಗಿ ಆಚರಿಸಲಾಗುತ್ತಿದೆ. ಈ ಹಿಂದೆ ಆಟಿ ಕೂಟ, ಕೆಡ್ಡಸ, ಇದೀಗ ಕೊರಳ ಪರ್ಬ, ಹೊಸ ಅಕ್ಕಿ ಊಟವನ್ನು ಆಚರಿಸಲಾಗಿದೆ. ಶಿಕ್ಷಣ ಇಲಾಖೆ, ಶಿಕ್ಷಣ ಪ್ರೇಮಿಗಳ , ಶಾಲಾಭಿವೃದ್ದಿ, ಪೋಷಕರ, ಶಿಕ್ಷಕರ , ವಿವಿಧ ಸಂಘಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ- ಪುರುಷೋತ್ತಮ ಪೂಜಾರಿ ಗುರುಂಪು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ
ಶಾಲೆಯ ಅಭಿವೃದ್ದಿ, ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗೆ ಹಾಕಿಕೊಳ್ಳುವ ಯೋಜನೆಗಳು ಯಶಸ್ವಿಯಾಗುವಲ್ಲಿ ಶಿಕ್ಷಕ ವೃಂದ, ಶಾಲಾಭಿವೃದ್ದಿ ಸಮಿತಿ, ಪಾಲಕರು, ಶಿಕ್ಷಣ ಪ್ರೇಮಿಗಳ ಪ್ರೋತ್ಸಾಹ ಅನನ್ಯವಾಗಿದೆ. ಸರ್ಕಾರಿ ಶಾಲೆಯಲ್ಲಿ ಕೇವಲ ಪಠ್ಯ ಮಾತ್ರ ಎನ್ನುವ ಅಪವಾದಕ್ಕೆ ನಮ್ಮ ಶಾಲೆ ಭಿನ್ನವಾಗಿದೆ. ಇನ್ನಷ್ಟು ಶಾಲಾ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ- ಮನೀಷ್ , ವಿದ್ಯಾರ್ಥಿ
ನಮ್ಮ ನಾಡು ನುಡಿ ಸಂಸ್ಕೃತಿ ಸಂಪ್ರದಾಯಗಳನ್ನು ಪರಿಚಯಿಸುವ ಕಾರ್ಯ ನಮ್ಮ ಶಾಲೆಯಲ್ಲಿ ನಡೆಯುತ್ತಿದೆ. ನಮ್ಮ ಸರ್ಕಾರಿ ಶಾಲೆ ಖಾಸಗಿ ಶಾಲೆಯಂತೆ ಗಮನ ಸೆಳೆಯುತ್ತಿದೆ. ತುಳುನಾಡಿನ ಆಚರಣೆಯಲ್ಲಿ ನಾವೆಲ್ಲ ಖುಷಿಯಿಂದ ಪಾಲ್ಗೊಳ್ಳುತ್ತೇವೆ. ಇದರಿಂದ ನಮ್ಮ ಹಿರಿಯರು ಆಚರಿಸುತ್ತಿದ್ದ ಆಚರಣೆ, ಸಂಸ್ಕೃತಿ ಸಂಪ್ರದಾಯಗಳ ಪರಿಚಯವಾದಂತಾಗುತ್ತದೆ.