ರಸ್ತೆ ಒತ್ತುವರಿ ತೆರವಿಗೆ ನೀಡಿದ ನೋಟೀಸ್ ಗೆ ತಡೆಯಾಜ್ಞೆ ► ಐತ್ತೂರು ಕೇನ್ಯ ನಿವಾಸಿಗಳಿಂದ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.12. ಐತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇನ್ಯ ಮನೆ ನಿವೇಶನಗಳಿಗೆ ಹೋಗುವ ರಸ್ತೆಯನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿಕೊಂಡಿದ್ದು, ಇದರ ತೆರವಿಗೆ ಗ್ರಾಮ ಪಂಚಾಯಿತಿ ನೋಟೀಸ್ ನೀಡದರೆ, ಸತ್ಯಾಸತ್ಯತೆ ತಿಳಿಯದ ತಾಲೂಕು ಪಂಚಾಯಿತಿಯವರು ನೋಟೀಸ್ ಗೆ ತಡೆಯಾಜ್ಞೆ ನೀಡಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕೇನ್ಯ ನಿವಾಸಿಗಳು ಎಚ್ಚರಿಸಿದ್ದಾರೆ.

ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೇನ್ಯ ಮನೆ ನಿವೇಶನದ ನಾಗರೀಕರ ಪರವಾಗಿ ಇಲ್ಲಿನ ರಶ್ಮಿ ಎಂಬವರು ಮಾತನಾಡಿ, ಕೇನ್ಯ ಎಂಬಲ್ಲಿ 51 ನಾಗರೀಕರಿಗೆ ಮನೆ ನಿವೇಶನ ಮಂಜೂರಾಗಿದ್ದು, ಮನೆ ಕಟ್ಟಿ ವಾಸವಿದ್ದೇವೆ. ನಿವೇಶನಗಳಿಗೆ ಕಾದಿರಿಸಿದ ರಸ್ತೆಯನ್ನು ಬೇರೆಯವರಿಗೆ ಕಾದಿರಿಸಿದ ನಿವೇಶನದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿ ಉಪಕಟ್ಟಡ ಕಟ್ಟಿರುತ್ತಾರೆ. ಇದರ ವಿರುದ್ಧ ಐತ್ತೂರು ಗ್ರಾಮ ಪಂಚಾಯಿತಿಗೆ ದೂರು ನೀಡಲಾಗಿತ್ತು. ಗ್ರಾಮ ಸಭೆಯಲ್ಲೂ ಪ್ರಸ್ತಾಪವಾಗಿತ್ತು. ಈ ಎಲ್ಲಾ ಹಿನ್ನೆಯಲ್ಲಿ ರಸ್ತೆ ಒತ್ತುವರಿ ತೆರವಿಗೆ ನೋಟೀಸ್ ನೀಡಲಾಗಿತ್ತು. ನೋಟೀಸ್ ನಲ್ಲಿ ವಾರದೊಳಗೆ ತೆರವುಗೊಳಿಸುವಂತೆ ಆದೇಶಿಸಲಾಗಿತ್ತು. ಇದೀಗ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯವರ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನಾಗಲೀ ಆಡಳಿತ ಮಂಡಳಿಯನ್ನಾಗಲೀ ವಿಚಾರಿಸಿದೆ ಏಕಾ ಏಕಿ ತಡೆಯಾಜ್ಞೆ ನೀಡಿರುವುದು ಸಮ್ಮತವಲ್ಲ. ಸತ್ಯಾಸತ್ಯತೆಯನ್ನು ಅರಿಯದೆ ಮಾಡಿರುವ ಈ ಕೆಲಸದಿಂದ ಸ್ಥಳೀಯರಿಗೆ ನೋವಾಗಿದೆ. ರಸ್ತೆ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿ ನಿವೇಶನಕ್ಕೆ ಕಾದಿರಿಸಿದ ಜಾಗದಲ್ಲಿ ಅಕ್ರವಾಗಿ ಕಟ್ಟಡ ಕಟ್ಟಿ 94 ಸಿ ಯಲ್ಲಿ ಹಕ್ಕು ಪತ್ರ ಪಡೆಯಲು ಮುಂದಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ತಾಲೂಕು ಪಂಚಾಯಿತಿಯಲ್ಲಿ ಈಗಾಗಲೇ ದಾವೆ ಹೂಡಲಾಗಿದೆ. ಇದು ಗೊತ್ತಿದ್ದರೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯವರು ಯಾವುದೋ ಒತ್ತಡಕ್ಕೆ ಮಣಿದು ರಸ್ತೆ ತೆರವಿಗೆ ನೀಡಿದ ನೋಟೀಸ್ ಗೆ ತಡೆಯಾಜ್ಞೆ ನೀಡಿರುವುದರಿಂದ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ನೀಡಿದ  ತಡೆಯಾಜ್ಞೆಯನ್ನು ಇನ್ನು ಮೂರು ದಿನಗಳ ಒಳಗೆ ತೆರವುಗೊಳಿಸಬೇಕು. ತಪ್ಪಿದಲ್ಲಿ ಮಾರ್ಚ್ 17 ಶನಿವಾರದಂದು ಪಂಚಾಯಿತಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಶ್ಮಿ ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲದೇ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಲಾಗುವುದು ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಮಿತಾ ರೈ, ಗೋಪಾಲಕೃಷ್ಣ ರೈ, ಜಾನಕಿ ತಿಮ್ಮಣ್ಣ, ವೀರಮ್ಮ, ಪದ್ಮನಾಭ, ಚಂದ್ರಾಕ್ಷ ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group