(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.12. ಶುಕ್ರವಾರದಂದು ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿ ಚಿಂತಾಜನಕ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಸುಳ್ಯಪದವು ನಿವಾಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಭಾನುವಾರದಂದು ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಕರ್ನಾಟಕ – ಕೇರಳ ಗಡಿ ಭಾಗದ ಪಡುವನ್ನೂರು ಗ್ರಾಮದ ಸುಳ್ಯಪದವು ಸಮೀಪದ ನೆಟ್ಟಣಿಗೆ ನಿವಾಸಿ ನಾಗರಾಜ ಮಣಿಯಾಣಿ ಎಂಬವರ ಪುತ್ರ ಪಡುವನ್ನೂರು ಗ್ರಾಮದ ಸರ್ವೋದಯ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಚರಣ್ ರಾಜ್ ಎಂದು ಗುರುತಿಸಲಾಗಿದೆ. ಮಾರ್ಚ್ 09 ರಂದು ಬೆಳಿಗ್ಗಿನ ಜಾವ ಮನೆಯ ಶೌಚಾಲಯದ ಬಳಿ ನೇಣು ಬಿಗಿದು ಅಸ್ವಸ್ಥಗೊಂಡಿದ್ದ ಚರಣ್ ರಾಜ್ ನನ್ನು ಮಂಗಳೂರು ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂಧಿಸದೆ ಭಾನುವಾರದಂದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿ ಶಾಲೆಯಲ್ಲಿ ರಾತ್ರಿ ತರಗತಿ ಆರಂಭಗೊಂಡಿದ್ದು ತಾನು ರಾತ್ರಿ ತರಗತಿಗೆ ಹೋಗುವುದಿಲ್ಲ. ಶಿಕ್ಷಕರು ಹಿಂಸೆ ನೀಡುತ್ತಾರೆ ಎಂದು ಚರಣ್ ರಾಜ್ ತನ್ನ ತಾಯಿಯಲ್ಲಿ ತಿಳಿಸಿ ಮಲಗಿದ್ದು, ಬೆಳಗ್ಗಿನ ಜಾವ ಎದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆನ್ನಲಾಗಿದೆ.