(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 01. ಇಲ್ಲಿನ ಖಾಸಗಿ ವಿದ್ಯಾ ಸಂಸ್ಥೆಯ ಹನ್ನೊಂದರ ಹರೆಯದ ವಿದ್ಯಾರ್ಥಿ ಮನೆಗೆ ತೆರಳುವ ಸಂದರ್ಭದಲ್ಲಿ ಬಸ್ ಪಾಸ್ ಹೊಂದಿರದ ಕಾರಣಕ್ಕೆ ದಾರಿ ಮಧ್ಯದಲ್ಲಿಯೇ ವಿದ್ಯಾರ್ಥಿಯನ್ನು ಬಸ್ಸಿನಿಂದ ಇಳಿಸಿ ಅವಮಾನಿಸಿದ ಘಟನೆ ಬಗ್ಗೆ ಬಾಲಕನ ಹೆತ್ತವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಹೊರಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕೆ ಎ19 ಎಫ್ 3276 ರನ್ನೇರಿದ್ದ ಈ ವಿದ್ಯಾರ್ಥಿಯು ಬಸ್ ನಿರ್ವಾಹಕ ಬಂದು ಬಸ್ ಪಾಸ್ ತೋರಿಸಲು ತಿಳಿಸಿದಾಗ , ಬಸ್ ಪಾಸ್ ಇಲ್ಲದಿರುವುದು ವಿದ್ಯಾರ್ಥಿಯ ಗಮನಕ್ಕೆ ಬಂದಿದೆ. ಪಾಸ್ ಇಲ್ಲದೆ ಬಸ್ಸಿನಲ್ಲಿ ಪ್ರಯಾಣಿಸಬಾರದೆಂದು ಆಜ್ಞಾಪಿಸಿ ಉಪ್ಪಿನಂಗಡಿ ಆತೂರು ಮಧ್ಯದ ರಸ್ತೆಯಲ್ಲಿ ಬಲವಂತವಾಗಿ ಆತನನ್ನು ಇಳಿಸಿದ್ದಾನೆ ಎಂದು ಆರೋಪಿಸಲಾಗಿದೆ.