(ನ್ಯೂಸ್ ಕಡಬ)newskadaba.com, ನವದೆಹಲಿ(ಅ.01): – ಭಾರತದಿಂದ ಅಮೇರಿಕಾಗೆ ತೆರಳುವ ಪ್ರವಾಸಿಗರು, ನುರಿತ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಯಾಣಿಕರಿಗೆ ಹೆಚ್ಚುವರಿ 2.50 ಲಕ್ಷ ವೀಸಾ ನೇಮಕಾತಿಗಳನ್ನು ತೆರೆದಿದೆ ಎಂದು ಅಮೆರಿಕ ರಾಯಭಾರಿ ಕಚೇರಿ ಹೇಳಿದೆ. ಕಳೆದ ವರ್ಷ 1.4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೀಸಾಗಳನ್ನು ನೀಡಲಾಗಿತ್ತು. ಕಳೆದ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾ ಪ್ರವಾಸ ಮುಗಿಸಿ ವಾಪಾಸ್ಸಾಗಿದ್ದರು. ಇದರ ಬೆನ್ನಲ್ಲೇ ಭಾರತದಿಂದ ಅಮೆರಿಕಾಕ್ಕೆ ಪ್ರವಾಸ ಹಾಗೂ ವ್ಯಪಾರ ವಹಿವಾಟು, ಪ್ರವಾಸ ಕೈಗೊಳ್ಳುವವರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಅಮೆರಿಕಾಕ್ಕೆ ಹೋಗಲು ಬಯಸುವ ಸುಮಾರು 2.50 ಲಕ್ಷ ಭಾರತೀಯರಿಗೆ ವೀಸಾ ನೀಡುವ ಪ್ರಕ್ರಿಯೆಗೆ ಭಾರತದಲ್ಲಿರುವ ಅಮೆರಿಕಾದ ರಾಯಭಾರಿ ಕಚೇರಿಗಳು ಚಾಲನೆ ನೀಡಿದೆ.ಯುಎಸ್ ಮಿಷನ್ ಟು ಇಂಡಿಯಾ ಎನ್ನುವ ಟ್ಯಾಗ್‌ಲೈನ್ ಅಡಿಯಲ್ಲಿ ವೀಸಾ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಇನ್ನು ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು-ಸಂಬಂಧ ಬಲಪಡಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಭಾರತದಲ್ಲಿನ ಅಮೆರಿಕಾದ ರಾಯಭಾರಿ ಕಚೇರಿ ತಿಳಿಸಿದೆ.